ಪುಟಗಳು

29 March 2019

ಮಹಿಳಾ ಸಮಾನತೆಯೆಂಬ ಮರೀಚಿಕೆ



“ಮಹಿಳಾ ಸಮಾನತೆಗೆ ಬೇಕಿರುವುದು ಗಂಡಿನಂತೆ ಹೆಣ್ಣು ಸಹ ಒಬ್ಬ ಮನುಷ್ಯಳು ಎಂಬ ಸರಳ ಸತ್ಯವನ್ನು ಸ್ವೀಕರಿಸಿ ಅವಳನ್ನು ಗೌರವಿಸುವ ಮನಸ್ಸುಗಳೇ ಹೊರತು ಹೆಣ್ಣೆಂದು ತೋರಿಸುವ ಕರುಣೆಯಲ್ಲ”.

ಮಹಿಳಾ  ಸಮಾನತೆಯೆಂಬ ಮರೀಚಿಕೆ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ  ನನ್ನಂತಹ ಅನೇಕ ಮಹಿಳೆಯರಿಗೆ ಕಾಡುವ ಪ್ರಶ್ನೆಗಳು... ನಿಜಕ್ಕೂ ಮಹಿಳಾ ದಿನವನ್ನು ಆಚರಿಸಲು ಕೇವಲ ಒಂದು ದಿನ ಸಾಕೆ? ವಿಶ್ವ ಮಹಿಳಾ ದಿನವೆಂದು ವರ್ಷದ ಒಂದು ದಿನದಂದು ಎಲ್ಲರಿಗೂ ಶುಭಾಶಯಗಳನ್ನು ಕೂರುವ ಮೂಲಕ ಆಚರಿಸುವುದರಿಂದ ಸಿಗುವುದಾದರೂ ಏನು? ಜಾಗತಿಕ ಮಟ್ಟದಲ್ಲಿ ನಡೆಯುವ ಇಂತಹ ದಿನಾಚರಣೆಯಿಂದಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರುವ ಒಬ್ಬ ಸಾಮಾನ್ಯ ಹೆಣ್ಣಿಗೆ ಎಂಥಹ ಪರಿಣಾಮ ಬೀರುತ್ತದೆ, ಆಕೆ ಬಾಳುತ್ತಿರುವ ಮನೆಯಿಂದ ಮತ್ತು ಅಥವಾ ಮನೆಯವರಿಂದ ದೊರೆಯಬೇಕಾದ ಗೌರವವಾದರೂ ಏನು? ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳಾ ಸಮಾನತೆ ಎಂಬುದು ವಾಸ್ತವಕ್ಕೆ ಎಷ್ಟು ಹತ್ತಿರವಾದ ಕಲ್ಪನೆ? ಇಂತಹ ಅದೆಷ್ಟೋ ಉತ್ತರ ಸಿಗದ ಪ್ರಶ್ನೆಗಳ ಸರಮಾಲೆಯೇ ಮುಂದೆ ಬರುತ್ತೆದೆ.
ಒಬ್ಬ ಸಾಮಾನ್ಯ ಹೆಣ್ಣು ತನ್ನ ಜೀವನಕ್ಕೆ ಅಥವ ತನ್ನ ಸಂಸಾರಕ್ಕೆ ಸಂಭಂದಿಸಿದ ನಿರ್ಧಾರಗಳನ್ನು ತೆಗುದುಕೊಳ್ಳಲು ಎಷ್ಟು ಸ್ವಾತಂತ್ರ್ಯವಿದೆ ? ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಮತ್ತು ಆ ಎಲ್ಲ ಯೋಜನೆಗಳಿಂದ  ನಿಜವಾಗಿಯೂ ಮಹಿಳಾ ಸಬಲೀಕರಣ ಸಾದ್ಯವಾಗುತ್ತಿದೆಯೇ ಇದರ ಬಗೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಬಂದಿವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಮಾನತೆ ಎಂಬುದು ಹೆಣ್ಣಿಗೆ ಅವಳ ಮನೆಯಿಂದಲೇ ದೊರೆಯುವುದು ಶುರುವಾಗಬೇಕೇ ಹೊರತು, ಕೇವಲ ಸರ್ಕಾರ ಮಾಡುವ ಕಾನೂನಿನ ಕಾಗದ ಪತ್ರಗಳ ಮೇಲಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ತನ್ನ ಮನೆಯೊಳಗ ಆಕೆಯನ್ನು ಸಮಾನವಾಗಿ ನೆಡೆಸಿಕೊಳ್ಳುತ್ತಿದ್ದೆವೆಯೇ ಎಂಬ ಪ್ರಶ್ನೆ ಪ್ರತಿ ಕುಟುಂಬದಲ್ಲೂ ಬಂದು ಇಣುಕಿ ಹೋಗುತ್ತದೆ. ಹೆಣ್ಣು ಮಕ್ಕಳ ಜೀವನದ ಪ್ರಮುಖ ಘಟ್ಟವೆಂದೆ ಪರಿಗಣಿತವಾದ ಮದುವೆ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಲು ಪೂರ್ತಿಯಾಗಿ ಅಲ್ಲದೆ ಹೋದರು ಸ್ವಲ್ಪ ಮಟ್ಟಿಗಾದರೂ ಸ್ವಾತಂತ್ರ್ಯ ದೊರೆತಿರುವುದು ಖುಷಿಪಡುವ ವಿಚಾರ. ಆದರೆ, ಇದು ಕೇವಲ ವಿಧ್ಯಾವಂತ ಅದರಲ್ಲೂ ಒಳ್ಳೆ ಕೆಲಸದಲ್ಲಿರುವ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇದು ಇನ್ನೂ ಅಸಾಧ್ಯ ಮತ್ತು ಹೆಣ್ಣು ತಾನು ಇಷ್ಟ ಪಟ್ಟವರನ್ನು ಮದುವೆಯಾಗಲು ಬಯಸುವುದು ಮನೆಯ ಮರ್ಯಾದೆ ಹೋಗಲು ಮಾಡುವ ಕೆಲಸವೇ ಆಗಿದೆ, ಇದಕ್ಕೆ ನಿದರ್ಶನವೆಂಬಂತೆ ಅನೇಕ ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯದಾ ಹತ್ಯೆಗಳು.
ಇನ್ನು ಮಹಿಳೆಗೆ ಸಂಭಂಧಿಸಿದ ಅತೀ ಪ್ರಚಲಿತದಲ್ಲಿರುವ ಮಾತೆಂದರೆ ನಾಲ್ಕು ಜನ ಗೌರವ ನೀಡಬೇಕಾದರೆ ಹೆಣ್ಣು ಒಂದಾದರು ಮಗುವನ್ನು ಹೆತ್ತು ತಾಯಿ ಎನಿಸಿಕೊಂಡಾಗ ಮಾತ್ರ ಎಂಬುದು ಇನ್ನೂ ಸಹ ಈ ಸಮಾಜದ ಮಟ್ಟಿಗೆ ನಿಜವೇ ಸರಿ, ಗಂಡು ಮಗು ಬೇಕೇ ಬೇಕೆಂಬುದನ್ನು ಬಹಿರಂಗವಾಗಿ ಹೇಳದೇ ಹೋದರು ಒಳಗೊಳಗೇ ಗಂಡು ಮಗು ಬೇಕೆಂಬುದೇ ಎಲ್ಲರ ಆದ್ಯತೆ. ಮಕ್ಕಳನ್ನು ಹೇರುವುದು ಕೇವಲ ಹೆಣ್ಣಿಗೆ ಮಾತ್ರ ಸಾದ್ಯ ಅದ್ದರಿಂದ ಹೆಣ್ಣು ದೇವತೆಗೆ ಸಮಾನ, ಹೆಣ್ಣು ಜನ್ಮ ಸಾರ್ಥಕವಾಗುವುದು ಒಂದಾದರು ಮಗುವನ್ನು ಹೆತ್ತರೆನೇ ಎಂಬ ಘೋಷಣೆಗಳೊಂದಿಗೆ ಶುರುವಾಗುವ ಮಾತುಗಳು ಅತ್ತೆಯ ಮನೆಯವರು ಮಾತ್ರವಲ್ಲದೆ ತಾಯಿಯ ಮನೆಯವರಿಂದಲೂ ಇನ್ನು ಎಷ್ಟು ದಿನ ಹೀಗೆ ಓಡಾಡಿಕೊಂಡು ಇರುವಿರಿ ಬೇಗ ಒಂದು ಮಗು ಮಾಡಿಕೊಳ್ಳಿ ಎಂಬ ಮಾತುಗಳನ್ನು ಕೇಳುವ ಕಿವಿಗಳು ಮಾತ್ರ ಹೆಣ್ಣಿನವೇ ಆಗಿವೆ. ಇದು ಕೇವಲ ಒಂದು ಉದಾಹರಣೆ ಮಾತ್ರ ಇಂತಹ ಅದೆಷ್ಟೋ ವಿಚಾರಗಳು, ಮನೆಯ ಒಳಗೆ ನಡೆಯುವ ಸನ್ನಿವೇಶಗಳು ಮಹಿಳೆಗೆ ಒಂದು ಸ್ವತಂತ್ರ ಅಸ್ಥಿಸ್ವವಿಲ್ಲ ಎಂದು ಬಿಂಬಿಸುವ ಪ್ರಯತ್ನವೇ ಆಗಿವೆ.
ಕಲಿತ ಹೆಣ್ಣುಮಗಳು ಮನೆಯ ಹೊರಗೂ ಒಳಗೂ ದುಡಿದು ಅಯ್ಯೋ ಏತಾಕ್ಕಾದರು ಕಲಿತು ದುಡಿಯಲು ಹೋದೇನೋ ಎಂಬ ಮೂಕವೇದನೆಯನ್ನು ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ, ವಿಧ್ಯೆ ಎಂಬುದು ವರವಾಗಬೇಕೆ ವಿನಃ ಶಾಪವಾಗಬಾರದು.  ಹೆಣ್ಣಿಗೆ ಇಂತಹ ಅದೆಷ್ಟೋ ಸಮಸ್ಯೆಗಳನ್ನು ಮೀರಿ ಬೆಳೆಯುವ ಶಕ್ತಿ ಇದೆ ಎಂದು ತೋರುವ ಕೆಲ ಮಾದರಿ ಮಹಿಳೆಯರನ್ನು ನೋಡಿ, ತಮ್ಮಲ್ಲೂ ಎಲ್ಲವನ್ನು ಸಾದಿಸುವ ಶಕ್ತಿ ಇದೆ ಎಂದು ನಂಬಿ; ಈ ಸಮಾಜದಲ್ಲಿ ಮಹಿಳಾ ಸಮಾನತೆ ಎನ್ನುವುದು ಮರೀಚಿಕೆ ಎಂದು ತಿಳಿದಿದ್ದರೂ ಸಾವಿರಾರು ವರ್ಷಗಳಿಂದ ದುಡಿಯುತ್ತಲೇ ಬರುತ್ತಿರುವ ಮಹಿಳೆಗೆ ಪ್ರತಿ ದಿನವು ‘ಮಹಿಳಾ ದಿನವೇ’ ಸರಿ.  ಮಹಿಳಾ ಸಮಾನತೆಗೆ ಬೇಕಿರುವುದು ಗಂಡಿನಂತೆ ಹೆಣ್ಣು ಸಹ ಒಬ್ಬ ಮನುಷ್ಯಳು ಎಂಬ ಸರಳ ಸತ್ಯವನ್ನು ಸ್ವೀಕರಿಸಿ ಅವಳನ್ನು ಗೌರವಿಸುವ ಮನಸ್ಸುಗಳೇ ಹೊರತು ಹೆಣ್ಣೆಂದು ತೋರಿಸುವ ಕರುಣೆಯಲ್ಲ. ಈಗ ಹೇಳಿ ಕೇವಲ ಮಾರ್ಚ್ 8 ರಂದು ಮಹಿಳಾ ದಿನ ಎಂದು ಆಚರಿಸಿದರೆ ಸಾಕೆ???


10 October 2015

ಅರ್ಥವೋ ? ಅನರ್ಥವೋ?


ಅಹಿಂಸೆಯೇ ಪರಮಧರ್ಮ ಎಂದರು ಗಾಂಧೀಜಿ.... ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದರು ಡಿ.ವಿ.ಜಿ. ಆದರೆ ಇಂದು ಮನುಷ್ಯ ಮನುಷ್ಯನನ್ನೇ ಕೊಂದು ಬದುಕುತ್ತಿರುವ ಸ್ಥಿತಿ...ಯಾರನ್ನು ನೆಮ್ಮದಿಯಿಂದ ಬಾಳಲು ಬಿಡದೆ ಹಿಂಸೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಮನುಷ್ಯ..ಹಿಂಸೆಯನ್ನೇ ವೈಭವೀಕರಿಸಿ TRP ಹಿಚ್ಚಿಸಿಕೊಳ್ಳುವ ಟಿ.ವಿ ವಾಹಿನಿಗಳು..ಹಿಂದೆ ಆದಿಮಾನವರು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಂಡು ಬದುಕುತ್ತಿದ್ದರು ಎಂದು ಕೇಳಿದ್ದೇವೆ ಮತ್ತು ಪ್ರಾಣಿಗಳಿಂದ ತಮಗೆ ತೊಂದರೆ ಬರುವಾಗ ಅವುಗಳನ್ನು ಕೊಂದು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಿದರು ಎಂಬುದನ್ನು ಸಹ ಕೇಳಿದ್ದೇವೆ ಆದರೆ ಇಂದು ಮನುಷ್ಯ ತಾನು ಬದುಕಲು ಏನು ಬೇಕಾದರು ಮಾಡುವ ಹಂತಕ್ಕೆ ತಲುಪಿದ್ದಾನೆ...ಎಷ್ಟು ಕ್ರೂರತನ ...ಎಂತಹ ಸ್ವಾರ್ಥ...

ಇನ್ನು ರಾಜಕೀಯ ದೊಂಬರಾಟ ನೋಡುವ ಹಾಗಿಲ್ಲ ಬಿಡುವ ಹಾಗಿಲ್ಲ....ಅಪ್ಪ- ಅಮ್ಮ ಬದುಕಿರುವಾಗ ನೋಡಿಕೊಳ್ಳದ ಮಕ್ಕಳು ಅವರು ಸತ್ತ ಮೇಲೆ ಅವರಿಗೆ ಇಷ್ಟವಾದುದನೆಲ್ಲ ಎಡೆ ಇಟ್ಟು ಪಕ್ಷ ಮಾಡುವಂತೆ; ರೈತರಿಗೆ ಕಷ್ಟ ಬಂದಾಗ ನೆರವಾಗದ ಸರ್ಕಾರ ಅವರು ಸತ್ತ ಮೇಲೆ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ಸರ್ಕಾರವಾಗಿದೆ...ಇನ್ನು ರೈತರ ಮನೆಗೆ ಹೋದರೆ ಅವರ ಕಣ್ಣೊರೆಸುವ ನಾಟಕ...ಇಲ್ಲವಾದರೆ ರೈತರ ನಿರ್ಲಕ್ಸ್ಯ ಎಂದು ದೂರುವ ವಿರೋಧ ಪಕ್ಷಗಳು. ಇನ್ನು ಎಷ್ಟೋ ವರ್ಷಗಳಿಂದ ಡಾಂಬರು ಕಾಣದ ರಸ್ತೆಗಳು, ಸ್ವಚತೆಯನ್ನು ಕಾಣದ ಹಳ್ಳಿ ಬೀದಿಗಳು...ಇಂದು ರಾಜಕೀಯ ಗಣ್ಯರ ಆಗಮನಕ್ಕಾಗಿ ತಯಾರಿಯಾಗಿವೆ.  ರಸ್ತೆಗಳಿಗೆ ಟಾರ್ ಹಾಕಿಸಿ...ಹಳ್ಳಿಯ ಬೀದಿ ಬೀದಿಗಳನ್ನು ಶುಚಿಗೊಳಿಸಿ, ಜೊತೆಗೆ ಪೋಲಿಸ್ ಕಾವಲು ಭದ್ರತೆಯ ದ್ರಿಷ್ಟಿಯಿಂದ...ನನಗೆ ಅನ್ನಿಸುತ್ತಿರುವುದು ಹೀಗೆ ರಾಜಕೀಯ ಗಣ್ಯರು ಬರುವ ಮಾತ್ರಕ್ಕೆ ಹಳ್ಳಿಗಳನ್ನು ಮದುವೆ ಮನೆಯಂತೆ ಅಲಂಕರಿಸುತ್ತಿರುವಾಗ ಏಕೆ ನಮ್ಮ ರಾಜಕೀಯ ಗಣ್ಯರು ತಿಂಗಳಿಗೊಮ್ಮೆ ಅಥವಾ ಆಗ್ಗಾಗ್ಗೆ ಏನೂ ಸೌಕರ್ಯ ಕಾಣಾದ ಹಳ್ಳಿಗಳಿಗೆ ಪ್ರವಾಸ ಕೈಗೊಳ್ಳಬಾರದು??? ಇದರಿಂದ ನಮ್ಮ ಹಳ್ಳಿಗಳು ಗಾಂಧೀಜೀಯವರ ಆಶಯದಂತೆ ಗ್ರಾಮ ಸ್ವರಾಜ್ಯಗಳಾಗುವ ಬದಲು ಕೊನೆ ಪಕ್ಷ ಗ್ರಾಮ ಶುಚಿತ್ವ ವಾದರೂ ಆಗಬಹುದು ಎಂಬುದು ನನ್ನ ಅನಿಸಿಕೆ...ಇದಕ್ಕೆ ನೀವೇನು ಹೇಳುತ್ತಿರಿ??

30 March 2015

ಸಂಭಳ ಭಾಗ್ಯ...ಸಿದ್ದರಾಮ್ಯನವರ ಸರ್ಕಾರದ ವರದಾನ...

ಶಾಸಕರ, ಸಚಿವರ ವೇತನದಲ್ಲಿ ಭಾರೀ ಹೆಚ್ಚಳ...ವಾಹ್ ಎಂತಹ ಸರ್ಕಾರ ನೋಡಿ... ರೈತನಂತೆ ಭೂಮಿ ಉತ್ತಲಿಲ್ಲ, ಭಿತ್ತಲಿಲ್ಲ...ಸರ್ಕಾರಿ ಕೆಲಸಗಾರರಂತೆ 10-5 ಘಂಟೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡಲಿಲ್ಲ...ಮಹಿಳೆಯರಂತೆ ಸಮಯದ ಅಂಕೆಯೇ ಇಲ್ಲದೆ ದುಡಿಯುತ್ತಿಲ್ಲ... ಆದರೂ ನಮ್ಮ ಜನನಾಯಕರಿಗೆ ವೇತನ ಹೆಚ್ಚಳ. ಎಂತಹ ನಾಡಿನಲ್ಲಿ ಬದುಕುತ್ತಿದೇವೆ...tomato ಬೆಲೆ ಒಂದೂವರೆ ಕೆ.ಜಿ. ಗೆ 10 ರುಪಾಯಿಯಾಗಿ ಬೆಳೆದ ರೈತ ಕಣ್ಣೀರಿನಲ್ಲಿ ಅಲ್ಲಲ್ಲ tomato ರಸದಲ್ಲಿಯೇ ಕೈತೊಳೆಯುತ್ತಿದ್ದಾನೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಇಂದು ಘೋಷಣೆಯಾಗಿರುವಾಗ ಇವುರುಗಳಿಗೆ ವೇತನದಲ್ಲಿ ಹೆಚ್ಚಳ. ಚುನಾವಣಾ ವೇಳೆ ಆಸ್ತಿ ಘೋಷಣೆ ಮಾಡುವಾಗ ಕೋಟ್ಯಂತರ ರುಪಾಯಿ ಆಸ್ತಿ ಇದೆ (ತಮ್ಮ ಕುಟುಂಬ/ಗಳ ಹೆಸರಿನಲಲ್ಲೂ) ಎಂದು ತೋರಿಸುವ ಶಾಸಕರ, ಸಚಿವರು ಪಾಪ ತಮ್ಮ ತಮ್ಮ ಸರ್ಕಾರೀ ವೇತನದಲ್ಲಿಯೇ ತಮ್ಮ ಕುಟುಂಬಗಳನ್ನೂ ಸಾಕುತ್ತಿದ್ದಾರೆ. ಸದನ ನೆಡೆಯುವಾಗ ದಿನಕ್ಕೆ 1500 ಭತ್ಯೆ. ಅಬ್ಬಾ... ಸದನದ ಹಾಜರಾತಿಗೆ ಸಹಿ ಮಾಡಿ ನಿದ್ದೆ ಮಾಡುತ್ತ ಭತ್ಯೆ ಪಡೆಯುವವರು ಒಂದು ಕಡೆಯಾದರೆ, ಸಹಿ ಮಾಡಿ ಹೊರಗೆ ಹೋಗುವವರು ಇನ್ನೊದು ಕಡೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಒನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ.

ಬ್ರಿಟೀಷರಿಗೆ ಕಪ್ಪ ಕೊಡಬೇಕಾಗಿ ಬಂದಾಗ ಗಂಡೆದೆಯ ಕಿತ್ತೂರಿನ ರಾಣಿ ಚೆನ್ನಮ್ಮ ಹೇಳಿದ ಮಾತುಗಳು ನಾವೆಲ್ಲರೂ ಎಂದು ಮರೆಯುವಂತಿಲ್ಲ...ಅದರ ಒಂದು ಚಿಕ್ಕ ಸಾಲು ‘ನೀವೇನು ರೈತರಂತೆ ಭೂಮಿ ಉತ್ತಿರೆ, ಬಿತ್ತಿರೆ ನಿಮಗೇಕೆ ಕೊಡಬೇಕು ಕಪ್ಪ’ ಎಂದು...ಇಲ್ಲಿಯೂ ಹಾಗೆ ನಮ್ಮದೇ ತೆರಿಗೆಯ ದುಡ್ಡಿನಲ್ಲಿ ನಮ್ಮನ್ನು ಸಾಲಗರರನ್ನಾಗಿ ಮಾಡಿ, ಹೆಗ್ಗಣಗಳಂತೆ ತಿಂದು ತೇಗುತ್ತಿರುವ ಶಾಸಕರ, ಸಚಿವರ, ಮುಖ್ಯಮಂತ್ರಿಗಳಿಗೂ ಸೇರಿತಂದೆ ವೇತನ ಹೆಚ್ಚಿಸಲು ಅನುಸರಿಸಿರುವ ಮಾನದಂಡಗಳು ಯಾವುದೆಂದು ಯಾರಿಗಾದರು ತಿಳಿದಿದೆಯೇ ?ಗೊತ್ತಿದ್ದರೆ ದಯವಿಟ್ಟು ತಿಳಿಸಿ...


‘ಮಾಡಿದ್ದುನ್ನೋ ಮಹರಾಯ’ ಎನ್ನುವಂತೆ ನಾವೇ ಆರಿಸಿ ಕಳುಹಿಸಿರುವ ಇವರುಗಳಿಗೆ ಒಂದು ಚೂರೂ ನೋವಾಗದಂತೆ ಇವರ ಮತ್ತು ಇವರ ಕುಟುಂಬ/ಗಳನ್ನೂ ನೋಡಿಕೊಳ್ಳುವುದು ನಮ್ಮ ಹೊಣೆ ಅಲ್ಲವೇ ಅದಕ್ಕಾಗಿ ನಮ್ಮ ತೆರಿಗೆಯ ಹಣದಿಂದ ಇವರಿಗೆ ಸಂಭಳ ಭಾಗ್ಯ ನೀಡೋಣ ....

07 February 2013

ಏನು ಬರೆಯೋದು ???

ಸುಮಾರು ಒಂದು ವರ್ಷ ಆಯಿತು ನನ್ನ ಬ್ಲಾಗ್ ನಲ್ಲಿ ಬರೆದು, ಏನಾದರು ಬರೆಯಬೇಕೆಂಬ ಹಂಬಲ, ಆದರೆ ಏನು ಬರೆಯುವುದು ಅನ್ನೋದು ಪ್ರಶ್ನೆ ? ಏನ್ರಿ ನಿಮಗೆ ಬರ್ಯೋಕೆ ಏನು ವಿಷಯನೇ  ಇಲ್ಲವಾ ಅನ್ನೋದು ನಿಮ್ಮ ಪ್ರಶ್ನೆಯಾದರೆ?? ತಲೆಯಲ್ಲೇನೋ ಅನೇಕ ವಿಷಗಳು ಓಡಾಡ್ತಾ ಇದ್ದಾವೆ ಆದ್ರೆ ಯಾವುದನ್ನ ಮೊದಲು ಬರೀಬೇಕು ಅನ್ನೋದು ನನ್ನ ಪ್ರಶ್ನೆ ; ನಮ್ಮ ರಾಜಕೀಯ ಡ್ರಾಮ ಬಗ್ಗೆ ಬರೆಯೋಣಾ ಅಂದರೆ ಅಯ್ಯೋ ಮನೆಗೆ ಹೋಗಿ ಟಿವಿ ಹಾಕಿದರೆ ಸಾಕು ಎಲ್ಲ ಚಾನೆಲ್ ಗಳು ತೋರಿಸೋ ದೊಂಬರಾಟನೇ ಸಾಕು ಇನ್ನು ನೀವು ಬರ್ಯೋದನ್ನು ಓದಬೇಕೇ ಅಂತ ನೀವು ಅನ್ಕೊಂಡ್ರೆ ? ದೆಹಲಿ ಗ್ಯಾಂಗ್ ರೇಪ್ ಬಗ್ಗೆ ಬರಿಯೋಣ ಅಂದ್ರೆ ಮತ್ತೆ ಆ ಕಹಿ ದುರ್ಘಟನೆಯನ್ನು  ನಾನು ನೆನಪು ಮಾಡಿಕೊಂಡು ಓದೋ ನಿಮಗೂ ನೆನಪು ಮಾಡೋ ಇಷ್ಟ ನನಗೆ ಇಲ್ಲ; ಇನ್ನು ಬೆಲೆ ಏರಿಕೆಯಲ್ಲಿ ಬೇಯುತ್ತಿರೋ ಜನಗಳ (ನನ್ನನ್ನು ಸೇರಿದಂತೆ ) ಬಗ್ಗೆ ಅರಿಯೋಣ ಅಂದ್ರೆ ಅದು ಅತ್ಯಂತ ದುಬಾರಿ ಅನ್ಸುತ್ತೆ; ನಮ್ಮ ಜನರಲ್ಲಿ ಮರೆಯಾಗ್ತಿರೋ ನೈತಿಕತೆ ಬಗ್ಗೆ ಬರೆಯೋಣ ಅನ್ಕೊಂಡ್ರೆ, ಬೇಡ ಪಾಪ ಅವ್ರು ಏನ್ ಮಾಡ್ತಾರೆ ಕಾಲ ಬದಲಾದ ಹಾಗೆ (ಜನ ಬದಲಾದರೆ ಕಾಲ ಬದಲಾಗುತ್ತೆ ) ಅವ್ರು ಕೂಡ ಬದಲಾಗಬೇಕು ಅನ್ನೋ ಅನಿಸಿಕೆ ಬರುತ್ತೆ; ಅಯ್ಯೋ ಮತ್ತೆ ಇನ್ಯಾವುದರ  ಬಗ್ಗೆ ಬರಿತೀರ ಅಂತ ಕೇಳ್ತಿರ....


 ಹೌದು ಈ  ಮೇಲೆ ಹೇಳಿರೋ ಎಲ್ಲ ವಿಷಯದ ಬಗ್ಗೆನು ಬರೀಬೇಕು ಅಂತ ಅನ್ನಿಸ್ತಿದೆ ...........ಆದ್ರೆ ಯಾವಾಗ ಬರ್ಯೋಕೆ ಶುರು ಮಡ್ತಿನೋ ಅದೇ ಪ್ರಶ್ನೆ... :(:( :(



31 December 2011

ವರ್ಷ ಕಳೆದರೇನು.... ನಾವು ನಾವೇ....!!!


ಇತಿಹಾಸದ ಪುಟಕ್ಕೆ ಮತ್ತೊದು ವರ್ಷ ಸೇರಿದೆ....ಇಂಥಹ ಅದೆಷ್ಟೋ ವರ್ಷಗಳು ಸರಿದಿವೆ ಆದರೂ ಮನುಷ್ಯನ ಆಸೆಗೆ ಮಿತಿಯೇ ಇಲ್ಲ, ಇದು ಅದೆಷ್ಟು ಸತ್ಯವಾದ ಮಾತು...ಹಣ, ಅಂತಸ್ತು, ಹೆಸರು ಇತ್ಯಾದಿ ಇತ್ಯಾದಿ ಅವನ ಬಯಕೆ... ಇದೆಲ್ಲ ಬಿಡಿ ಇದರಂತಹ ಅದೆಷ್ಟೋ ವರ್ಷ ಕಳೆದರು ಇನ್ನು ಬಾಳಿ ಬದುಕಬೇಕೆಂಬ ಆಸೆ...ಬದುಕಿರುವಷ್ಟು ದಿನ ಸುಖದಿಂದಲೇ ಬದುಕಬೇಕೆಂಬ ಕನಸು...ನಮಗೆಲ್ಲ ಗೊತ್ತಿರುತ್ತದೆ ಬದುಕಿನಲ್ಲಿ ಬರೀ ಸುಖವನ್ನೇ ಅನುಭವಿಸಲು ಸಾದ್ಯವಿಲ್ಲ ಎಂದು...ಆದರು ನಿಲುಕದಕ್ಕೆ ಕೈ ಚಾಚುತ್ತಿರುತ್ತೇವೆ...ನಮಗೆ ಏನು ಸಿಕ್ಕರೆ ಸುಖವಾಗಿರುತ್ತೇವೆ ಎಂಬುದರ ಅರಿವು ನಮಗಿರುತ್ತದೆ.... ಅಷ್ಟಕ್ಕೂ ನಾವು ಬಯಸುವುದೇನು?? ಇಡೀ ಜೀವನ ನೆಮ್ಮದಿಯಾಗಿ  ಇರಬೇಕಂದೆ?? ಬಹಳಷ್ಟು ಜನರ ಮಟ್ಟಿಗೆ ಇದು ಹೌದು ಎನ್ನುವುದಾದರೆ ಆ ನೆಮ್ಮದಿ ಎಂಬ ಪದದಲ್ಲಿ ಏನೆಲ್ಲಾ ಅಡಗಿದೆ....ನೆಮ್ಮದಿಯಾಗಿ ಇರಲು ಬಯಸುವುದು ಇಷ್ಟೇ....ಒಂದು ಸ್ವಂತ ಮನೆ...ಒಂದು ಕಾರು..ಮುದ್ದಾದ ಸಂಸಾರ...ನಮ್ಮ ಸರ್ವಜ್ಞನ ವಚನ ಇದೆಯಲ್ಲ...ಬೆಚ್ಚನೆ ಗೂಡು..ವೆಚ್ಚಕ್ಕೆ ಹೊನ್ನು..ಇಚ್ಛೆ ಅರಿವ ಸತಿ.. ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಆದರೆ ನಾವು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಬದಲು ಇರುವ ಜೀವನವನ್ನ ನರಕ ಮಾಡಿಕೊಂಡು ಸ್ವರ್ಗಕ್ಕೆ ಹೋಗಲು ಪರಿತಪಿಸುತ್ತಿರುತ್ತೇವೆ.
ಇದು ಒಬ್ಬ  ವ್ಯಕ್ತಿಯ ಕಥೆಯಾದರೆ ಇನ್ನು ವ್ಯವಸ್ಥೆಗೆ ಬರೋಣ..ನಮ್ಮ ವ್ಯವಸ್ಥೆಯೋ ಭ್ರಷ್ಟಾಚಾರದಲ್ಲಿ ಮುಳುಗಿ ಮಿಂದು ಅದರಲ್ಲಿಯೂ ಬೆರೆತು ಹೋಗಿದೆ...ವ್ಯವಸ್ಥೆ ಎಂದರೆ ಭ್ರಷ್ಟಾಚಾರ... ಭ್ರಷ್ಟಾಚಾರ  ಎಂದರೆ ವ್ಯವಸ್ಥೆ ಎಂಬಂತಾಗಿದೆ...೨೦೧೦ ಹಗರಣಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ ೨೦೧೧ ಅದಕಿಂತ ಏನು ಭಿನ್ನವಾಗಿಲ್ಲ... ಹಗರಣಗಳು...ರಾಜಕೀಯ ಸಮರ...ಕುರ್ಚಿಗಾಗಿ ಗುದ್ದಾಟ... ಎಲ್ಲಿ ಹೆಚ್ಚು ಲಾಭ ಮಾಡಿಕೊಳ್ಳಬಹುದೋ ಅಲ್ಲಿ ತಮ್ಮ ಬೆಲೆ ಬೇಯಿಸಿಕೊಳ್ಳುವ ಹೊಲಸು ನಾಯಕರು, ಪಕ್ಷದಿಂದ ಪಕ್ಷಕ್ಕೆ ಹಾರುವ...ಪಕ್ಷದಲ್ಲಿ ನಮಗೆ ಬೆಲೆ ಇಲ್ಲ ಎಂದು ರಾಜಿನಾಮೆ ಕೊಡುವ ನಾಯಕರು,...ಅಲ್ಲಿ ರಾಜಿನಾಮೆ ನೀಡಿ ಚುನಾವಣೆ ಎದುರಿಸಲು ನಾನು ಸಿದ್ದ ಎಂದು ಹೆಮ್ಮೆಯಿಂದ ದೇಶ ರಕ್ಷಣೆಗೆ ಹೊರಡಲು ಸಿದ್ದವಿರುವ ಸೈನಿಕರಂತೆ ಹೆಮ್ಮೆಯಿಂದ  ಹೇಳಿಕೊಳ್ಳುವ ಹೊಲಸು ರಾಜಕೀಯ ವ್ಯಕ್ತಿಗಳು...ಚುನಾವಣೆಗೆಂದು ಲಕ್ಷಂತ ರುಪಾಯಿ ಖರ್ಚು ಮಾಡಿ ಅದನ್ನು ಸಾಮಾನ್ಯ ಜನರ ತಲೆಯ ಮೇಲೆ ಹೇರುವುದು... ಜನ ಸಾಮಾನ್ಯ  ಅಲ್ಲಿ ಇಲ್ಲಿ ಉಳಿಸಿ ತೆರಿಗೆ ಕಟ್ಟಿದ ಹಣ ಎಲ್ಲಿಲ್ಲಿ ಹೇಗೇಗೆ ವೆಚ್ಚವಾಗುತ್ತದೆ ನೋಡಿ...
ಇನ್ನು ಸಾಮಾನ್ಯನ ಕೂಗು ಕೇಳದ ಸರ್ಕಾರ....೩ ತಿಂಗಳಿಗೊಮ್ಮೆ ೪ ತಿಂಗಳಿಗೊಮ್ಮೆ ಪೆಟ್ರೋಲ್, ಹಾಲು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ....ಹೇಗಿದ್ದರೂ ಕೊಂಡುಕೊಳ್ಳುತ್ತರೆಂಬ ಭಂಡ ಧೈರ್ಯ ನಮ್ಮ ಸರ್ಕಾರಕ್ಕೆ...ಅಭಿವೃದ್ದಿ ಅಬ್ಧಿವ್ರುದ್ದಿ ಎಂದು ಬೊಬ್ಬೆ ಹೊಡೆಯುವ ಸರ್ಕಾರ...ನಮ್ಮ ಸರ್ಕಾರ ಇಷ್ಟು ಮಾಡಿದೆ...ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವ ಮುಂಚೆ ಮಾಡಿರುವಷ್ಟರಲ್ಲಿ ಎಷ್ಟು ಪಾಲು ನಿಜವಾಗಿ ಸೇರಬೇಕಾಗಿರುವ ಕಡೆ ಸೇರಿದೆ ಎಂದು ನೋಡಿದರೆ ಉತ್ತಮ....ವ್ಯವಸ್ಥೆಯ ಬಗ್ಗೆ ಭ್ರಮ ನಿರಸನ ಗೊಂಡಿರುವ ಮತದಾರ ಪ್ರಭು...ಪ್ರಭು ಅಲ್ಲ ನಿಜವಾದ ಅರ್ಥದಲ್ಲಿ ಭಿಕ್ಷುಕ....ಅಯ್ಯೋ ಬಿಡಿ ಇಲ್ಲ ಸರ್ಕಾರಗಳು ಅಷ್ಟೇ ಓಟಕುವುದಷ್ಟೇ ನಮ್ಮ ಕೈನಲ್ಲಿರುವುದು ಎಂದು ಕೈಚೆಲ್ಲಿ ಕುಳಿತುಬಿಟ್ಟಿದ್ದಾನೆ.  ನಾವು ಬದಲಾವಣೆ ಅಗಲಿ ಎಂದು ಬಯಸುತ್ತೇವೆ ಹೊರತು ಆ ಬದಲಾವಣೆ ನನ್ನಿಂದಲೇ ಆಗಲಿ ಎಂದು ಏಕೆ ಯೋಚಿಸದೆ, ಅದಕ್ಕೆ ಪ್ರಯತ್ನವೂ ಪಡದೆ....ಪ್ರಯತ್ನ ಪಟ್ಟವರನ್ನು ಅವರ ಪಾಡಿಗೆ ಬಿಡದೆ ಟೀಕಿಸುತ್ತಾ ಇರುತ್ತೇವೆ.
ಬದಲಾವಣೆ ಜಗದ ನಿಯಮ ಅನ್ನೋ ಮಾತಿದೆ, ಜಗತ್ತು ಬದಲಾಗುತ್ತಿದೆಯೋ ಇಲ್ಲ ಮನುಷ್ಯ ಬದಲಾಗುತ್ತಿದ್ದಾನೋ ಎರಡು ಗೊಂದಲ...ಜಗತ್ತು...ಕಾಲ ಬದಲಾದರು ಯಾವಾಗಲು ನಮ್ಮ ಬೇಡಿಕೆಗಳು ಯಾಕೆ ಬದಲಾಗುವುದಿಲ್ಲ...ಯಾವಾಗಲು ಸುಖವಾಗಿರಬೇಕು...ಹಣ ಸಂಪಾದಿಸಬೇಕು...ಇವೆಲ್ಲವನ್ನೂ ಬಿಟ್ಟು ಒಂದು ಸುಂದರ  ಅರ್ಥಪೂರ್ಣ ಬದುಕು ನಡೆಸಲು ಮುಂದಾಗುವುದಕ್ಕೆ ಇನ್ನು ಇಂಥಹ ಅದೆಷ್ಟು ವರ್ಷಗಳು ಸರಿಯಬೇಕೋ.....???
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.....೨೦೧೨ ನಿಮ್ಮಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲೆಂದು ಹಾರೈಸುತ್ತೇನೆ....ಇದೇನಪ್ಪ ಇಷ್ಟು ಹೊತ್ತು ಮನುಷ್ಯ ಸುಖ, ನೆಮ್ಮದಿ ಮಾತ್ರ ಬಯಸುತ್ತಾನೆ... ಎಂತಹ ಸ್ವಾರ್ಥ ಜೀವಿ ಮನುಷ್ಯ ಎಂದು ಹೇಳಿ ಮತ್ತೆ ಸುಖ, ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸುತ್ತಿದ್ದೇನೆ ಎಂದು ಕೇಳಬೇಡಿ....ಹಾರೈಸುವುದೊಂದೇ  ನಮ್ಮ ಕೈಲಿರುವುದು ಅಲ್ಲವೇ???

15 December 2011

ಕ್ರಾಂತಿಯ ಆರಂಭ ಎಲ್ಲಿಂದ ?? ಯಾರಿಂದ ??



ಮಾನವನ ಸ್ವಭಾವವೇ ಹಾಗೆ ಅನಿಸುತ್ತದೆ ಇರುವ ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುತ್ತಾ ಇರುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಗುಂಪಿನಲ್ಲಿ ನಿಂತು ಸ್ನೇಹಿತರ ಜೊತೆ ಹರಟುತ್ತಿರುತ್ತೇವೆ. ಅಲ್ಲಿ ನಾವು ಮಾತನಾಡುವ ಪರಿ ಹೇಗಿರುತ್ತದೆಯೆಂದರೆ ಅಲ್ಲಿಂದಲೇ ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಉಗಮವಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬದಲಾವಣೆ ತಂದುಬಿಡುತ್ತೇವೆನೋ ಎಂಬ ಭಾವನೆ ಮೊಳೆಯುತ್ತದೆ, ನಂತರ ಈ ಎಲ್ಲಾ ಯೋಚನೆಗಳು ನಡೆದ ಮರು ಘಳಿಗೆ ಇಲ್ಲವನ್ನು ಮರೆತು ನಮ್ಮ ಮನೆ-ನಮ್ಮದೇ ಅದ ವೈಯುಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗುತ್ತೇವೆ. ಇನ್ನು ರಸ್ತೆ ಬದಿಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡುವಾಗ ಇರುವ ಆಸಕ್ತಿ ಮತ್ತು ನಾಯಕತ್ವದ ಭಾವನೆ ಅದರ ಮುಂದಾಳತ್ವ ವಹಿಸಿ ಅದನ್ನು ಕಾರ್ಯರೂಪಕ್ಕೆ ತರುವಾಗ ಮಾತ್ರ ಹಿಂದೆ ಸರಿದು ಬಿಡುತ್ತದೆ. 

ಒಬ್ಬ ಸಾಮಾನ್ಯ ಮನುಷ್ಯ ಕ್ರಾಂತಿ ಎಂಬ ಪದ ಕೇಳುತ್ತಲೇ ಅವನಿಗೆ ಬರುವ ಯೋಚನೆ ಯಾವುದೊ ಒಂದು ಬಾಹ್ಯ ಶಕ್ತಿಯ ಕಾರಣ ಅಥವಾ ಆಗಮನದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಿವುದು ಎಂದು ಅನೇಕರು ಭಾವಿಸಿರುತ್ತಾರೆ. ಯಾವುದೊ ಒಬ್ಬ ವ್ಯಕ್ತಿ ಅಥವ ಯಾವುದೊ ಒಂದು ಸಂಘಟನೆ ಕ್ರಾಂತಿಯ ಮುಂದಾಳತ್ವ ವಹಿಸಿ ಪರಿವರ್ತನೆ ಆಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ. ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ ಅದೆಷ್ಟೋ ಕ್ರಾಂತಿಗಳು ಸಂಭವಿಸಿರುವುದು ಕಣ್ಣಮುಂದೆ ಬಂದು ನಿಲ್ಲುತ್ತವೆ; ಒಂದು ವ್ಯವಸ್ಥೆ ಅಥವಾ ವ್ಯಕ್ತಿಯ ದಬ್ಬಾಳಿಕೆಯಿಂದ ಬೇಸತ್ತ ಜನರು ದಂಗೆಯೆದ್ದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. 1792 1802ರ ಕಾಲಘಟ್ಟದಲ್ಲಿ ನೆಡದ ಫ್ರೆಂಚ್ ಕ್ರಾಂತಿ, ರಾಜನ ದಬ್ಬಾಳಿಕೆಗೆ ಬೆಂದ ಜನರು ದಂಗೆಯೆದ್ದದ್ದು; ಅಂತೆಯೇ 1917 ರಲ್ಲಿ ಸಂಭವಿಸಿದ ರಷ್ಯ ಕ್ರಾಂತಿಯು ಸಹ ತನ್ನದೇ ಆದ ಸ್ವರೂಪ ಹೊಂದಿತ್ತು, ಕ್ರಾಂತಿ ಎಂದಾಗ ಕೇವಲ ಯುದ್ದಗಳೆಂದಲ್ಲ, ಒಂದು ಕಡೆ ಯುದ್ದಗಳ ಮೂಲಕ ಕ್ರಾಂತಿಯು ತನ್ನ ಸ್ವರೂಪವನ್ನು ತೋರಿಸಿದರೆ ಇನ್ನೊಂದೆಡೆ ಕೈಗಾರಿಕ ಕ್ರಾಂತಿ, ಹಸಿರು ಕ್ರಾಂತಿಯಂತಹ ಅದೆಷ್ಟೋ ಕ್ರಾಂತಿಗಳು ಮನುಷ್ಯನ ಜೀವನದ ಶೈಲಿಗೆ ಸದ್ದಿಲ್ಲದೆ ಲಗ್ಗೆ ಹಾಕಿರುವುದು ಕಾಣುತ್ತೇವೆ. 

ಯುದ್ದಗಳ ಮೂಲಕ ಇರುವ ವ್ಯವಸ್ಥೆಯ ಪರಿವರ್ತನೆ ಆಗಿರುವುದು ಕ್ರಾಂತಿಯ ಒಂದು ಮುಖವಾದರೆ, ವಿವಿಧ ರೀತಿಯ ಆವಿಷ್ಕಾರ–ಅನ್ವೇಷಣೆಗಳ ಮೂಲಕ ಸಮಾಜ ಪರಿವರ್ತನೆಯ ಕಡೆಗೆ ಸಾಗುವಂತೆ ಮಾಡುವುದು ನಮಗೆ ಕಂಡಿರುವ ಕ್ರಾಂತಿಯ ಇನ್ನೊಂದು ಮುಖ. ಕ್ರಾಂತಿ ಸಂಭವಿಸಿತೆಂದರೆ ಅದರ ಪರಿಣಾಮ ಧನಾತ್ಮಕವಾಗಿಯೇ ಇರುತ್ತದೆಂದು ಹೇಳಲಾಗದು, ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ಅದ ಪರಿವರ್ತನೆ ಧನಾತ್ಮಕವಾಗಿಯೇ ಕಂಡರೂ ಭವಿಷ್ಯದಲ್ಲಿ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಇದಕ್ಕೆ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಪರಿಣಾಮವಾಗಿ ಕೃಷಿ, ಉತ್ಪಾದನೆ, ಗಣಿಗಾರಿಕೆ, ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ಮಹತ್ವದ ಪರಿವರ್ತನೆ ತಂದಿತು. ಇದರ  ಪರಿಣಾಮವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಉಂಟಾಗಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಇಂದು ಗುರುತಿಸುವಂತಾಗಿದೆ. ಇನ್ನು ಹಸಿರು ಕ್ರಾಂತಿಯಿಂದಾಗಿ ಆದ ಪರಿಣಾಮ ತತ್ಕ್ಷಣಕ್ಕೆ ಅತೀ ಮಹತ್ವದೆನಿಸಿದರು, ಅತಿಯಾದ ರಾಸಾಯನಿಕಗಳು, ವಿವಿ ರೀತಿಯ ಔಷಧಿಗಳ ಬಳಕೆಯಿಂದಾಗಿ ಭೂಮಿಯ ಮೇಲಾದ ಪರಿಣಾಮವನ್ನು ನಾವು ಮರೆಯುವಂತಿಲ್ಲ; ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬಂದಿರುವುದು ಜೊತೆಗೆ ಅತೀ ಹೆಚ್ಚು ಇಳುವರಿ ಪಡೆಯಲು ನಾವು ಬಳಸುವ ರಾಸಾಯನಿಕಗಳ ಸಂಖ್ಯೆ ಕಡಿಮೆಯೇನಿಲ್ಲ.

ಜಪಾನ್ ನಲ್ಲಿ ಅದ ಅನಿಲ ಸೋರಿಕೆಯ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಹಾಗೆಯೆ ಇದೆ... ಇತ್ತೀಚಿಗೆ ನಡೆದ ಘಟನೆಯನ್ನು ಮರೆಯಲು ಹೇಗೆ ಸಾಧ್ಯ? ಪರಮಾಣು ಶಕ್ತಿಯಿಂದ ಜಗತ್ತನ್ನೇ ತನ್ನ ಹತೋಟಿಗೆ ತರುತ್ತೇನೆ ಎಂದು ಯೋಚಿಸಿದ ಮಾನವ ಪರಮಾಣು ಶಕ್ತಿಯಿಂದ ಕ್ರಾಂತಿ ಮಾಡಲು ಹೊರಟ, ಅದರಿಂದ ಆದ ದುಷ್ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಮಾನವ ವಿವಿದ ರೀತಿಯ ಅನ್ವೇಷಣೆಗಳ ಮೂಲಕ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಆವಿಷ್ಕಾರಗಳ ಮೂಲಕ ಅಭಿವೃದ್ದಿಯ ಕಡೆ ಸಾಗುತ್ತಿದ್ದೇವೆ ಎಂದು ತಿಳಿದು ಭವಿಷ್ಯದಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಇಂದಿನ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುವುದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಒಂದು ಜ್ವಲಂತ ನಿರ್ಶನ.

ಹಿಂದೆಲ್ಲಾ ಕ್ರಾಂತಿ ಎಂದರೆ ತಟ್ಟನೆ ನೆನಪಾಗುವುದು ಸಾಮಾಜಿಕ ಬದಲಾವಣೆ ಅಥವಾ ವ್ಯವಸ್ಥೆಯನ್ನೇ ಬದಲಾಯಿಸುವುದಕ್ಕಾಗಿ; ಇಂಥಹ ಒಂದು ಮಹತ್ತರ ಉದ್ದೇಶಕ್ಕೆ ಕ್ರಾಂತಿಯಂತಹ ಕಾರ್ಯಾಚರಣೆಗಳು ನಡೆಯುತ್ತಿತ್ತು. ಹಾಗಾಗಿ ಸಾಮಾನ್ಯರಿಗೆ ಕ್ರಾಂತಿ ಎಂದರೆ ದೊಡ್ಡ ವಿಷಯ ಮತ್ತು ಭಾರವಾದ ಪದವಾಗಿಯೂ ಕಾಣುತ್ತಿತ್ತು. ಆದರೆ ಇಂದು ಸಣ್ಣ ಪುಟ್ಟ ಕಾಲೆಳೆಯುವ ತಂತ್ರಗಳನ್ನು ಕೂಡಾ ಕ್ರಾಂತಿ ಪಟ್ಟಿಯಲ್ಲಿ ಸೇರಿಸಿದ್ದೇವೆ, ಕ್ರಾಂತಿಯ ಮೂಲ ಅರ್ಥ ನಾವು ಎಂದುಕೊಂಡ ಸ್ವರೂಪದಲ್ಲಿಲ್ಲ. ನಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯದ ರಾಜಕೀಯ ಡೊಂಬರಾಟವನ್ನು ಮಾಧ್ಯಮದಲ್ಲಿ ಬಿತ್ತರಿಸಿರುವ ರೀತಿ, ಪ್ರತಿದಿನ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ಕ್ರಾಂತಿ ಎಂಬ ಪದ ಬಳಕೆ ಮಾಡಿರುತ್ತಾರೆ.  

ಬದಲಾವಣೆ ಯಾರಿಗೆ ಬೇಡ!, ಬದಲಾವಣೆಯಿಂದ ಏನಾದರು ಒಳ್ಳೆಯದಾಗಲಿ ಎನ್ನುವ ಆಕಾಂಕ್ಷೆ ಸಹಜವಾಗಿಯೇ ಇರುತ್ತದೆ. ಹಾಗಾಗಿ ಕ್ರಾಂತಿಯ ಗುಣಗಳು ಎಲ್ಲರಲ್ಲಿಯೂ ಇರುತ್ತವೆ, ಎಲ್ಲರೂ ಅದನ್ನು ಪ್ರದರ್ಶಿಸಲು ಹೋಗುವವರೆ, ಸಾರ್ವಜನಿಕ ಹಿತಾಸಕ್ತಿಗೋಸ್ಕರ ತೊಡಗಿಕೊಳ್ಳುವವರಿಗೆ ಹಲವರ ಸಹಾಯ ಹಸ್ಥ ಸಿಗುತ್ತದೆ. ಇತ್ತೀಚಿಗೆ ಭ್ರಷ್ಟಾಚಾರದ ವಿರುದ್ದ ಕ್ರಾಂತಿಗೆ ನಾಂದಿ ಹಾಡಿದ ಅಣ್ಣಾ ಹಜಾರೆ ಇದಕ್ಕೊಂದು ಉತ್ತಮ ನಿದರ್ಶನ. ಇನ್ನು ಕೆಲವರದ್ದು ಕ್ರಾಂತಿಯ ಸ್ವರೂಪ ಮತ್ತು ಮುನ್ನಡೆಸುವಲ್ಲಿನ ಕಾರ್ಯತಂತ್ರಗಳು ವಿಭಿನ್ನವಾಗಿರುತ್ತದೆ, ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿಯಿಂದ ಹತ್ತಿಕ್ಕಲ್ಪಡುತ್ತದೆ ಅಥವಾ ಅದರ ಮೊಣಚನ್ನು ಕಳೆದುಕೊಂಡಿರುತ್ತದೆ. ಕ್ರಾಂತಿ ಮನುಷ್ಯನ ಸಹಜ ಗುಣವಾಗಬೇಕು, ಕ್ರಾಂತಿ ಎಲ್ಲೂ ಅದೃಷ್ಯವಾಗಿರುವುದಿಲ್ಲ. ಪ್ರತೀ ವ್ಯಕ್ತಿಯಲ್ಲಿಯೂ ಕ್ರಾಂತಿಯ ಸ್ವಭಾವವಿರುತ್ತದೆ ಕೆಲವರು ಪ್ರಕಟಿಸುತ್ತಾರೆ ಮತ್ತೆ ಕೆಲವರು ಕ್ರಾಂತಿಯನ್ನು ಬೆಂಬಲಿಸುವ ಮೂಲಕ ವ್ಯಕ್ತಪಡಿಸುತ್ತಾರೆ ಇನ್ನು ಕೆಲವರು ಸಂಘಗಳು, ಸಂಘಟನೆ ಇತ್ಯಾದಿಗಳನ್ನು ಸೇರುವ ಮೂಲಕ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ವ್ಯಕ್ತಿ ತನ್ನ ಬೇಕು ಬೇಡಗಳನ್ನು ವಿಮರ್ಷಿಸಬೇಕು, ಬೇಡವಾದಾಗ, ಶೋಷಣೆಗೆ ಒಳಗಾದಾಗ ದೊಡ್ಡ ದ್ವನಿಯೊಂದು ಮೊಳಗಬೇಕು, ಆಗ ಕ್ರಾಂತಿಗೆ ನಾಂದಿ ಹಾಡಿದಂತೆ ಮತ್ತು ಅದರ ಧ್ವನಿಗೆ ಮನುಕುಲದ ಪ್ರಾಮಾಣಿಕ ಒಳಿತಿಗೆ ಕೈಜೋಡಿಸುವ ಜೊತೆಗೆ ಅನ್ಯಾಯವನ್ನು ವಿರೋಧಿಸುವ ಜನಸಮೂಹ ಕಟ್ಟಿಕೊಳ್ಳುವ ಶಕ್ತಿ ಅದಕ್ಕಿರಬೇಕು. ಇದರಿಂದಾಗಿ ಸಮಾಜ ಒಂದು ಬದುಕಲು ಯೋಗ್ಯ ತಾಣವಾಗಿ ರೂಪುಗೊಳ್ಳುವಲ್ಲಿ ಎರಡು ಮಾತಿಲ್ಲ ಅಲ್ಲವೇ??