ಮಾನವನ ಸ್ವಭಾವವೇ ಹಾಗೆ ಅನಿಸುತ್ತದೆ ಇರುವ ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುತ್ತಾ ಇರುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಗುಂಪಿನಲ್ಲಿ ನಿಂತು ಸ್ನೇಹಿತರ ಜೊತೆ ಹರಟುತ್ತಿರುತ್ತೇವೆ. ಅಲ್ಲಿ ನಾವು ಮಾತನಾಡುವ ಪರಿ ಹೇಗಿರುತ್ತದೆಯೆಂದರೆ ಅಲ್ಲಿಂದಲೇ ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಉಗಮವಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬದಲಾವಣೆ ತಂದುಬಿಡುತ್ತೇವೆನೋ ಎಂಬ ಭಾವನೆ ಮೊಳೆಯುತ್ತದೆ, ನಂತರ ಈ ಎಲ್ಲಾ ಯೋಚನೆಗಳು ನಡೆದ ಮರು ಘಳಿಗೆ ಇಲ್ಲವನ್ನು ಮರೆತು ನಮ್ಮ ಮನೆ-ನಮ್ಮದೇ ಅದ ವೈಯುಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗುತ್ತೇವೆ. ಇನ್ನು ರಸ್ತೆ ಬದಿಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡುವಾಗ ಇರುವ ಆಸಕ್ತಿ ಮತ್ತು ನಾಯಕತ್ವದ ಭಾವನೆ ಅದರ ಮುಂದಾಳತ್ವ ವಹಿಸಿ ಅದನ್ನು ಕಾರ್ಯರೂಪಕ್ಕೆ ತರುವಾಗ ಮಾತ್ರ ಹಿಂದೆ ಸರಿದು ಬಿಡುತ್ತದೆ.
ಒಬ್ಬ ಸಾಮಾನ್ಯ ಮನುಷ್ಯ ಕ್ರಾಂತಿ ಎಂಬ ಪದ ಕೇಳುತ್ತಲೇ ಅವನಿಗೆ ಬರುವ ಯೋಚನೆ ಯಾವುದೊ ಒಂದು ಬಾಹ್ಯ ಶಕ್ತಿಯ ಕಾರಣ ಅಥವಾ ಆಗಮನದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಿವುದು ಎಂದು ಅನೇಕರು ಭಾವಿಸಿರುತ್ತಾರೆ. ಯಾವುದೊ ಒಬ್ಬ ವ್ಯಕ್ತಿ ಅಥವ ಯಾವುದೊ ಒಂದು ಸಂಘಟನೆ ಕ್ರಾಂತಿಯ ಮುಂದಾಳತ್ವ ವಹಿಸಿ ಪರಿವರ್ತನೆ ಆಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ. ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ ಅದೆಷ್ಟೋ ಕ್ರಾಂತಿಗಳು ಸಂಭವಿಸಿರುವುದು ಕಣ್ಣಮುಂದೆ ಬಂದು ನಿಲ್ಲುತ್ತವೆ; ಒಂದು ವ್ಯವಸ್ಥೆ ಅಥವಾ ವ್ಯಕ್ತಿಯ ದಬ್ಬಾಳಿಕೆಯಿಂದ ಬೇಸತ್ತ ಜನರು ದಂಗೆಯೆದ್ದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. 1792 – 1802ರ ಕಾಲಘಟ್ಟದಲ್ಲಿ ನೆಡದ ಫ್ರೆಂಚ್ ಕ್ರಾಂತಿ, ರಾಜನ ದಬ್ಬಾಳಿಕೆಗೆ ಬೆಂದ ಜನರು ದಂಗೆಯೆದ್ದದ್ದು; ಅಂತೆಯೇ 1917 ರಲ್ಲಿ ಸಂಭವಿಸಿದ ರಷ್ಯ ಕ್ರಾಂತಿಯು ಸಹ ತನ್ನದೇ ಆದ ಸ್ವರೂಪ ಹೊಂದಿತ್ತು, ಕ್ರಾಂತಿ ಎಂದಾಗ ಕೇವಲ ಯುದ್ದಗಳೆಂದಲ್ಲ, ಒಂದು ಕಡೆ ಯುದ್ದಗಳ ಮೂಲಕ ಕ್ರಾಂತಿಯು ತನ್ನ ಸ್ವರೂಪವನ್ನು ತೋರಿಸಿದರೆ ಇನ್ನೊಂದೆಡೆ ಕೈಗಾರಿಕ ಕ್ರಾಂತಿ, ಹಸಿರು ಕ್ರಾಂತಿಯಂತಹ ಅದೆಷ್ಟೋ ಕ್ರಾಂತಿಗಳು ಮನುಷ್ಯನ ಜೀವನದ ಶೈಲಿಗೆ ಸದ್ದಿಲ್ಲದೆ ಲಗ್ಗೆ ಹಾಕಿರುವುದು ಕಾಣುತ್ತೇವೆ.
ಯುದ್ದಗಳ ಮೂಲಕ ಇರುವ ವ್ಯವಸ್ಥೆಯ ಪರಿವರ್ತನೆ ಆಗಿರುವುದು ಕ್ರಾಂತಿಯ ಒಂದು ಮುಖವಾದರೆ, ವಿವಿಧ ರೀತಿಯ ಆವಿಷ್ಕಾರ–ಅನ್ವೇಷಣೆಗಳ ಮೂಲಕ ಸಮಾಜ ಪರಿವರ್ತನೆಯ ಕಡೆಗೆ ಸಾಗುವಂತೆ ಮಾಡುವುದು ನಮಗೆ ಕಂಡಿರುವ ಕ್ರಾಂತಿಯ ಇನ್ನೊಂದು ಮುಖ. ಕ್ರಾಂತಿ ಸಂಭವಿಸಿತೆಂದರೆ ಅದರ ಪರಿಣಾಮ ಧನಾತ್ಮಕವಾಗಿಯೇ ಇರುತ್ತದೆಂದು ಹೇಳಲಾಗದು, ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ಅದ ಪರಿವರ್ತನೆ ಧನಾತ್ಮಕವಾಗಿಯೇ ಕಂಡರೂ ಭವಿಷ್ಯದಲ್ಲಿ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಇದಕ್ಕೆ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಪರಿಣಾಮವಾಗಿ ಕೃಷಿ, ಉತ್ಪಾದನೆ, ಗಣಿಗಾರಿಕೆ, ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತಂದಿತು. ಇದರ ಪರಿಣಾಮವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಉಂಟಾಗಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಇಂದು ಗುರುತಿಸುವಂತಾಗಿದೆ. ಇನ್ನು ಹಸಿರು ಕ್ರಾಂತಿಯಿಂದಾಗಿ ಆದ ಪರಿಣಾಮ ತತ್ಕ್ಷಣಕ್ಕೆ ಅತೀ ಮಹತ್ವದೆನಿಸಿದರು, ಅತಿಯಾದ ರಾಸಾಯನಿಕಗಳು, ವಿವಿಧ ರೀತಿಯ ಔಷಧಿಗಳ ಬಳಕೆಯಿಂದಾಗಿ ಭೂಮಿಯ ಮೇಲಾದ ಪರಿಣಾಮವನ್ನು ನಾವು ಮರೆಯುವಂತಿಲ್ಲ; ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬಂದಿರುವುದು ಜೊತೆಗೆ ಅತೀ ಹೆಚ್ಚು ಇಳುವರಿ ಪಡೆಯಲು ನಾವು ಬಳಸುವ ರಾಸಾಯನಿಕಗಳ ಸಂಖ್ಯೆ ಕಡಿಮೆಯೇನಿಲ್ಲ.
ಜಪಾನ್ ನಲ್ಲಿ ಅದ ಅನಿಲ ಸೋರಿಕೆಯ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಹಾಗೆಯೆ ಇದೆ... ಇತ್ತೀಚಿಗೆ ನಡೆದ ಈ ಘಟನೆಯನ್ನು ಮರೆಯಲು ಹೇಗೆ ಸಾಧ್ಯ? ಪರಮಾಣು ಶಕ್ತಿಯಿಂದ ಜಗತ್ತನ್ನೇ ತನ್ನ ಹತೋಟಿಗೆ ತರುತ್ತೇನೆ ಎಂದು ಯೋಚಿಸಿದ ಮಾನವ ಪರಮಾಣು ಶಕ್ತಿಯಿಂದ ಕ್ರಾಂತಿ ಮಾಡಲು ಹೊರಟ, ಅದರಿಂದ ಆದ ದುಷ್ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಮಾನವ ವಿವಿದ ರೀತಿಯ ಅನ್ವೇಷಣೆಗಳ ಮೂಲಕ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಆವಿಷ್ಕಾರಗಳ ಮೂಲಕ ಅಭಿವೃದ್ದಿಯ ಕಡೆ ಸಾಗುತ್ತಿದ್ದೇವೆ ಎಂದು ತಿಳಿದು ಭವಿಷ್ಯದಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಇಂದಿನ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುವುದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಒಂದು ಜ್ವಲಂತ ನಿಧರ್ಶನ.
ಹಿಂದೆಲ್ಲಾ ಕ್ರಾಂತಿ ಎಂದರೆ ತಟ್ಟನೆ ನೆನಪಾಗುವುದು ಸಾಮಾಜಿಕ ಬದಲಾವಣೆ ಅಥವಾ ವ್ಯವಸ್ಥೆಯನ್ನೇ ಬದಲಾಯಿಸುವುದಕ್ಕಾಗಿ; ಇಂಥಹ ಒಂದು ಮಹತ್ತರ ಉದ್ದೇಶಕ್ಕೆ ಕ್ರಾಂತಿಯಂತಹ ಕಾರ್ಯಾಚರಣೆಗಳು ನಡೆಯುತ್ತಿತ್ತು. ಹಾಗಾಗಿ ಸಾಮಾನ್ಯರಿಗೆ ಕ್ರಾಂತಿ ಎಂದರೆ ದೊಡ್ಡ ವಿಷಯ ಮತ್ತು ಭಾರವಾದ ಪದವಾಗಿಯೂ ಕಾಣುತ್ತಿತ್ತು. ಆದರೆ ಇಂದು ಸಣ್ಣ ಪುಟ್ಟ ಕಾಲೆಳೆಯುವ ತಂತ್ರಗಳನ್ನು ಕೂಡಾ ಕ್ರಾಂತಿ ಪಟ್ಟಿಯಲ್ಲಿ ಸೇರಿಸಿದ್ದೇವೆ, ಕ್ರಾಂತಿಯ ಮೂಲ ಅರ್ಥ ನಾವು ಎಂದುಕೊಂಡ ಸ್ವರೂಪದಲ್ಲಿಲ್ಲ. ನಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯದ ರಾಜಕೀಯ ಡೊಂಬರಾಟವನ್ನು ಮಾಧ್ಯಮದಲ್ಲಿ ಬಿತ್ತರಿಸಿರುವ ರೀತಿ, ಪ್ರತಿದಿನ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ‘ಕ್ರಾಂತಿ’ ಎಂಬ ಪದ ಬಳಕೆ ಮಾಡಿರುತ್ತಾರೆ.
ಓ ಭಾರತಾಂಬೆಯ ಮಕ್ಕಳೇ ಎದ್ದು ಬನ್ನಿರಿ
ReplyDeleteಶುಭ್ರವಾಗಿಸೋಣ ಈ ನಮ್ಮ ದೇಶವ
ಜಾತಿಯ ಮರೆತು ಒಂದಾಗಿ ಸೇರೋಣ
ಅನ್ಯಾಯದ ಕಳೆಯ ಕೀಳೋಣ ಬನ್ನಿ..
ನವಚೈತನ್ಯವ ನವೋಲ್ಲಾಸವ ತುಂಬಿಕೊಂಡು ಬನ್ನಿ
ತೊಲಗಿಸೋಣ ಭ್ರಷ್ಟಾಚಾರವ ದೇಶದಿಂದ
ಭಗತ್ ಸಿಂಗ್, ಆಜಾದ್, ಸುಭಾಷರ ಹಾಗೆ
ಕೆಚ್ಚೆದೆಯ ಹೋರಾಟವ ಮಾಡೋಣ ಬನ್ನಿರಿ...
ಕ್ರಾಂತಿ ಗೀತೆಯ ಹಾಡುತಲಿ ಹೊಡೆದೋಡಿಸೋಣ ಉಗ್ರರ
ಸಮಾಜವ ಶುಚಿ ಮಾಡೋಣ ಲಂಚವೆಂಬ ಕೊಳೆಯ ಕಿತ್ತೊಗೆದು
ಪ್ರತಿಯೊಬ್ಬರೂ ಆಗೋಣ ಒಬ್ಬೊಬ್ಬ ಯೋಧ
ನಿರ್ಮಿಸೋಣ ಯಾರೂ ಅಲುಗಾಡಿಸದ ಭವ್ಯ ಭಾರತವ