ಪುಟಗಳು

21 December 2010

ಕಳೆಯುತಿಹುದು ಮತ್ತೊಂದು ವರ್ಷ....ಮಾಡಿದ ಸಾಧನೆ...???

ಇಲ್ಲಿ ನಾನು ನನ್ನ ಬಗ್ಗೆಯಾಗಲಿ ಅಥವಾ ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯ ಬಗ್ಗೆ ಬರೆಯುತ್ತಿಲ್ಲ ಬದಲಿಗೆ ಕೊಳೆತು ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ಮತ್ತು ಪಕ್ಷಗಳ ಸಾಧನೆಗಳ ಬಗ್ಗೆ ಬರೆಯುತ್ತಿದ್ದೇನೆ. ಇನ್ನೇನು ಕೆಲವು ದಿನಗಳು ಮಾತ್ರ ಉಳಿದಿದೆ 2010  ಕಳೆದು ಹೋದ ವರ್ಷಗಳ ಸಾಲಿಗೆ ಸೇರಿಬಿಡುತ್ತದೆ.... 2010 ರಲ್ಲಿ ಆಗಿಹೋದ ಮತ್ತು ಇನ್ನು ನೆಡುತ್ತಿರುವ ಘಟನೆಗಳು ನಮ್ಮ ಪ್ರಜಾಪ್ರಭುತ್ವವನ್ನು ತಲೆ ತಗ್ಗಿಸುವಂತೆ ಮಾಡಿದೆ... ಬಹುಷಃ ಈ ವರ್ಷದಲ್ಲಿ ಕಂಡುಬಂದಂತಹ ಹಗರಣಗಳು ಬೇರೆ ಇನ್ಯಾವ ವರ್ಷದಲ್ಲೂ ಕಂಡುಬಂದಿಲ್ಲ ಎಂದು ಹೇಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗರಣಗಳು ಒಂದರ ಮೇಲೊಂದಂತೆ ಬೆಳಕಿಗೆ ಬರುತ್ತಿದ್ದರೆ, ಇತ್ತ ಸಾಮಾನ್ಯ ಮನುಷ್ಯ ತನ್ನ ಜೀವನ ಸಾಗಿಸಲು ಪರದಾಡುತ್ತಿದ್ದಾನೆ... ಒಂದೊಂದು ಹಗರಣಗಳಲ್ಲಿ ಭ್ರಷ್ಟರು ನುಂಗಿ ನೀರು ಕೂಡಿರುವ ಹಣವೆಷ್ಟು?? ಇತ್ತೀಚಿಗೆ ಬೆಳಕಿಗೆ ಬಂದ 2G ಸ್ಪೆಕ್ಟ್ರಂ ಹಗರಣದಿಂದಾಗಿ ಸರ್ಕಾರಕ್ಕೆ ಅದ ನಷ್ಟ ಬರೋಬ್ಬರಿ 1.76 ಲಕ್ಷ ಕೋಟಿ...ಅಬ್ಬ!! ಲಕ್ಷ-ಕೋಟಿ ಎರಡರ ಸಮಾಗಮ...ಇನ್ನು ಕಾಮನ್ ವೆಲ್ತ್ ನಿಂದಾದ ಹಗರಣದಿಂದಾಗಿ ಆದ ನಷ್ಟ 27.000 ಕೋಟಿ...ಇನ್ನು ಮುಂಬೈ ನ ಆದರ್ಶ ಹೌಸಿಂಗ್ ಸೊಸೈಟಿಯ ಹಗರಣ....ಕಾರ್ಗಿಲ್ ನಲ್ಲಿ ಮಾಡಿದ ವೀರಯೋಧರ ಕುಟುಂಬಗಳಿಗೆ ನೀಡಿದ ಭೂಮಿಯಲ್ಲಿಯು ನಮ್ಮ ರಾಜಕೀಯ ವ್ಯಕ್ತಿಗಳು, ಅವರ ಸಂಬಂಧಿಕರಿಗೆ ಹಂಚಿದ್ದಾರಂತೆ.....ಇನ್ನು ಬೆಳಕಿಗೆ ಬಾರದ ಹಗರಣಗಳೆಷ್ಟೋ???

ಇದರಲ್ಲಿ ನಮ್ಮ ಕರ್ನಾಟಕದ ಪಾಲೇನು ಕಡಿಮೆಯಿಲ್ಲ...BJP ಆಡಳಿತಕ್ಕೆ ಬಂದು ಎಡರುವರೆ ವರ್ಷ ಆಯಿತು...ಅವರು ಈ ಅವಧಿಯಲ್ಲಿ ಮಾಡಿದ್ದು...ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಆಪರೇಷನ್ ಕಮಲ....ನಂತರ ತಮ್ಮ  ತಮ್ಮ ಅತ್ಮಿಯರಾದವರಿಗೆ  ಖಾತೆ ಹಂಚಿಕೆಯಲ್ಲಿ (ಅದೆಷ್ಟು ಭಾರಿ) ಕಾಲಹರಣ....ಅದಾದ ನಂತರ ರೆಡ್ಡಿ ಸಹೋದರರು ತಿರುಗಿ ಬಿದ್ದಾಗ ಅವರ ಸಮಾಧಾನ ಕಾರ್ಯ....ನಂತರ BJP  ಸರ್ಕಾರವನ್ನು ಅಲುಗಾಡಿಸಿದ ರೆಸಾರ್ಟ್ ರಾಜಕೀಯ.....ಗಣಿ ಅವ್ಯವಹಾರ...ಭೂ ಹಗರಣ....ಒಂದೆರಡಲ್ಲ  ನಮ್ಮ ರಾಜ್ಯ ಸರ್ಕಾರದ ಸಾಧನೆ !!!  ಇವುಗಳ ಮಧ್ಯೆ ಸೀರೆ ಹಂಚುವುದರಲ್ಲಿ....ಚುನಾವಣ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಎಂದಾದರೂ ಸಾಮಾನ್ಯ ಜನರ ಕಷ್ಟಗಳೇನು...ಅದಕ್ಕೆ ಮಾಡಬೇಕಾದುದೇನು ಎಂದು ಯೋಚಿಸಿದ್ದಾರೆಯೇ ?? ಯೋಚಿಸಿದ್ದು ಭ್ರಷ್ಟರಾಗಿ ಎಷ್ಟು ಹಣ ಸಂಪಾದಿಸಬಹುದೆಂದು ಮತ್ತು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೇರೆ ಏರಿಕೆ....ಈ ಎಲ್ಲಾ ಹಗರಣಗಳಿಂದ ಸರ್ಕಾರಕ್ಕೆ ಇಷ್ಟು ಕೋಟಿ ನಷ್ಟವಾಗಿದೆ ಎಂದು ಹೇಳುವಾಗ ನಾವು ತಿಳಯಬೇಕಾಗಿರುವುದು ನಷ್ಟವಾಗಿರುವುದು ಸರ್ಕಾರಕ್ಕೆ  ಇನಿಸಿದರು ಅದರ ಪರಿಣಾಮ ಮಾತ್ರ ಆಗುತ್ತಿರುವುದು ಜನರ ಮೇಲೆ....ನಷ್ಟವಾಗಿರುವ ಇಷ್ಟೂ ಹಣವನ್ನು ಜನ ಸಾಮಾನ್ಯರ ಅಭಿವೃದ್ದಿಗಾಗಿ ಕರ್ಚು ಮಾಡಿದರೆ ನಮ್ಮ ದೇಶ ಬಡತನ ಮುಕ್ತ ರಾಷ್ಟ್ರವಾದರೂ ಆಗುತ್ತಿತ್ತೇನೋ..ಇಂದಿಗೂ ಸಹ ನಮ್ಮ ದೇಶದಲ್ಲಿ 37% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಸಾಮಾನ್ಯರ ಕಷ್ಟಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ...ತಾವಾಯಿತು...ತಮ್ಮ ಕುರ್ಚಿಯಾಯಿತು ಎಂದಿರುವ ಇವರಿಗೆ ಕನಿಷ್ಠ ಮಾನವಿಯತೆಯು ಇಲ್ಲದಂತಾಗಿದೆ....ಹಗರಣಗಳಿಂದಾದ ನಷ್ಟದ ಹಣ ವಾಪಸ್ಸು ಬರುವುದೇ??? ಇಷ್ಟು ಹಣದಲ್ಲಿ ಯಾರ್ಯಾರು ಎಷ್ಟು ಎಷ್ಟು ಹಣ ನುಂಗಿದ್ದಾರೆ?? ಇವುಗಳ ತನಿಖೆ ಆಗುವಷ್ಟರಲ್ಲಿ ಜನರು ಎಲ್ಲವನ್ನು ಮರೆತುಬಿಟ್ಟಿರುತ್ತಾರೆ. ಇವುಗಲ್ಲನ್ನೇ ಅಸ್ತ್ರವಾಗಿಸಿಕೊಂಡು ಪರಸ್ಪರ ಕೆಸೆರೆರಚಾಟವನ್ನು ಪ್ರತಿನಿತ್ಯ ನೋಡುತ್ತಿದ್ದೇವೆ....ಯಾವಾಗಲು "ರಾಜೀನಾಮೆ ನೀಡಲಿ" ಎಂಬ ಮಾತು ಮಾತ್ರ ಕೇಳಿಬರುತ್ತದೆ....ಕೇವಲ ರಾಜೀನಾಮೆ ನೀಡಿದರೆ ಅವರು ಮಾಡಿರುವ ನಷ್ಟಕ್ಕೆ ಸುಮನಾದಂತೆ ಏನು??? ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಆ ಕಡೆಗೆ ಹಾರುವ ಶಾಸಕರು..... ಕುರ್ಚಿ ಕಳೆದುಕೊಂಡಾಗ ಕಣ್ಣಲ್ಲಿ ನೀರು ಹಾಕುವ ಇವರು ನಾವು ಆರಿಸಿ ಕಳುಹಿಸಿರುವ ನಾಯಕರು....

ಇದರ ಜೊತೆಗೆ ಮತ್ತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಚುನಾವಣ ಭರಾಟೆ...ಮತ್ತೆ ಅದೇ ಕುರುಡು ಕಾಂಚನ ಆಟ, ಚುನಾವಣ ನೀತಿ ಸಂಹಿತಿಯನ್ನು ಪಾಲಿಸುವರು ಯಾರು?? ಸಾಮಾನ್ಯ ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವ ಪಕ್ಷಗಳು....ನೋಟಿನ ಆಸೆಗೆ ಓಟನ್ನು ಮಾರಿಕೊಳ್ಳುವ ಕೆಲವು ಮತದಾರರು....ನಮ್ಮನ್ನಾಳುವ ನಾಯಕರನ್ನು ಆರಿಸುವಾಗ ಅವರನ್ನು ಅಳೆಯುವ ಮಾನದಂಡವಾದರೂ ಯಾವದು?? ಜಾತಿ?? ಅಂತಸ್ತು ?? ಇದುವರೆಗೆ ಅವರು ಮಾಡಿರುವ ಜನಸೇವೆಯೇ?? ಇಲ್ಲ ನಮಗೆ ಅವರು ಆ ಕ್ಷಣದಲ್ಲಿ ನೀಡುವ ನೋಟು?? ನಮ್ಮ ಮಾನ್ಯ ಮುಖ್ಯಮಂತ್ರಿಗಳು ಮೊನ್ನೆ ಚುನಾವಣ ಪ್ರಚಾರಕ್ಕಾಗಿ ಹೋಗಿದ್ದಾಗ ಪತ್ರಿಕಾ ಪ್ರತಿನಿಧಿಯೊಬ್ಬರು ಹಗರಣಗಳ ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ...ನಮ್ಮ ಸಾಮಾನ್ಯ ಜನರು ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರಿಗೆ ಇವುಗಳ ಅರಿವೇ ಇಲ್ಲ...ಈ ಬಾರಿಯೂ BJP  ಗೆದ್ದು ಬರಲಿದೆ ಎಂದು....ಇದೇ ಸಾಮಾನ್ಯ ಜನರ ಓಟು ಬೇಕಿತ್ತು ಅವರು ಮುಖ್ಯಮಂತ್ರಿಗಳಾಗಲು....ಸಂಮಿಶ್ರ  ಸರ್ಕಾರದ ಅವಧಿಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಇದನ್ನು ನಾನು ಸಾಮಾನ್ಯ ಜನರ ಮುಂದೆ ಇಡುತ್ತೇನೆ ಎಂದು ಹೇಳುವಾಗ ಸಾಮಾನ್ಯ ಜನ ಬೇಕಿತ್ತು....ಅಷ್ಟೆ ಯಾಕೆ ಕುರ್ಚಿ ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೆಲ್ಲ ಕಣ್ಣಲ್ಲಿ ನೀರು ಹಾಕಿದ್ದು ಇದೆ ಸಾಮಾನ್ಯ ಜನರ ಮುಂದೆ ತಾನೆ???  ಯಾರಿಗೆ ಏನಾದರು ಆಗಲಿ ನಾವು ಭ್ರಷ್ಟರಾಗಿಯೇ ಇರುತ್ತೇವೆ ...ಹಾಗೆಯೆ ಮುಂದುವರೆಯುತ್ತೇವೆ ಎನ್ನುವ ಇಂಥಹವರ ಮಧ್ಯೆ ಜನರ ಗೋಳು ಕೇಳುವರಾರು?? ಎಷ್ಟೆಲ್ಲಾ ನಡೆಯುತ್ತಿದ್ದರು ಸುಮ್ಮನೆ ನೋಡುತ್ತಾ....ಶಾಪ ಹಾಕುತ್ತ...ಅವರಾಡುವ ರಾಜಕೀಯ ದೊಂಬರಾಟ ನೋಡುತ್ತಾ ಏನು ಮಾಡಲಾಗದೆ ಕೈಚೆಲ್ಲಿ ಕುಳಿತಿರುವ ಭವ್ಯ ಭಾರತದ, ಗಂಧದ ಗುಡಿಯ ಚೆಂದದ ಪ್ರಜೆಗಳು ನಾವುಗಳು.......     

1 comment:

  1. @Savitha BC,
    ನೀವು ವ್ಯಕ್ತಪಡಿಸಿರುವ ವಿಚಾರ ಸರಿಯಾದುದೇ ಆಗಿದೆ, ಇವತ್ತು ಇಡೀ ವ್ಯವಸ್ಥೆ ಭ್ರಷ್ಟವಾಗುತ್ತಾ ಹೋಗುತ್ತಿದೆ. ಅಧಿಕಾರಸ್ಥರ ಭ್ರಷ್ಟಚಾರಕ್ಕೆ ಮೂಲ ಸಾಮಾನ್ಯ ಮತದಾರನೇ ಆಗಿದ್ದಾನೆ, ಎಲ್ಲ ಹಂತಗಳಲ್ಲೂ ಬೇರೂರಿರುವ ಭ್ರಷ್ಟಚಾರಕ್ಕೆ ಕೊನೆ ಹಾಡಲು ಯುವಜನರ ಸಂಕಲ್ಪ ಬೇಕು. ಅಲ್ಲಿಯವರೆಗೂ ಇದೆಲ್ಲ ಹೀಗೆ ಮುಂದುವರೆಯುವುದೇನೋ :(

    ReplyDelete