ಪುಟಗಳು

29 March 2019

ಮಹಿಳಾ ಸಮಾನತೆಯೆಂಬ ಮರೀಚಿಕೆ



“ಮಹಿಳಾ ಸಮಾನತೆಗೆ ಬೇಕಿರುವುದು ಗಂಡಿನಂತೆ ಹೆಣ್ಣು ಸಹ ಒಬ್ಬ ಮನುಷ್ಯಳು ಎಂಬ ಸರಳ ಸತ್ಯವನ್ನು ಸ್ವೀಕರಿಸಿ ಅವಳನ್ನು ಗೌರವಿಸುವ ಮನಸ್ಸುಗಳೇ ಹೊರತು ಹೆಣ್ಣೆಂದು ತೋರಿಸುವ ಕರುಣೆಯಲ್ಲ”.

ಮಹಿಳಾ  ಸಮಾನತೆಯೆಂಬ ಮರೀಚಿಕೆ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ  ನನ್ನಂತಹ ಅನೇಕ ಮಹಿಳೆಯರಿಗೆ ಕಾಡುವ ಪ್ರಶ್ನೆಗಳು... ನಿಜಕ್ಕೂ ಮಹಿಳಾ ದಿನವನ್ನು ಆಚರಿಸಲು ಕೇವಲ ಒಂದು ದಿನ ಸಾಕೆ? ವಿಶ್ವ ಮಹಿಳಾ ದಿನವೆಂದು ವರ್ಷದ ಒಂದು ದಿನದಂದು ಎಲ್ಲರಿಗೂ ಶುಭಾಶಯಗಳನ್ನು ಕೂರುವ ಮೂಲಕ ಆಚರಿಸುವುದರಿಂದ ಸಿಗುವುದಾದರೂ ಏನು? ಜಾಗತಿಕ ಮಟ್ಟದಲ್ಲಿ ನಡೆಯುವ ಇಂತಹ ದಿನಾಚರಣೆಯಿಂದಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರುವ ಒಬ್ಬ ಸಾಮಾನ್ಯ ಹೆಣ್ಣಿಗೆ ಎಂಥಹ ಪರಿಣಾಮ ಬೀರುತ್ತದೆ, ಆಕೆ ಬಾಳುತ್ತಿರುವ ಮನೆಯಿಂದ ಮತ್ತು ಅಥವಾ ಮನೆಯವರಿಂದ ದೊರೆಯಬೇಕಾದ ಗೌರವವಾದರೂ ಏನು? ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳಾ ಸಮಾನತೆ ಎಂಬುದು ವಾಸ್ತವಕ್ಕೆ ಎಷ್ಟು ಹತ್ತಿರವಾದ ಕಲ್ಪನೆ? ಇಂತಹ ಅದೆಷ್ಟೋ ಉತ್ತರ ಸಿಗದ ಪ್ರಶ್ನೆಗಳ ಸರಮಾಲೆಯೇ ಮುಂದೆ ಬರುತ್ತೆದೆ.
ಒಬ್ಬ ಸಾಮಾನ್ಯ ಹೆಣ್ಣು ತನ್ನ ಜೀವನಕ್ಕೆ ಅಥವ ತನ್ನ ಸಂಸಾರಕ್ಕೆ ಸಂಭಂದಿಸಿದ ನಿರ್ಧಾರಗಳನ್ನು ತೆಗುದುಕೊಳ್ಳಲು ಎಷ್ಟು ಸ್ವಾತಂತ್ರ್ಯವಿದೆ ? ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಮತ್ತು ಆ ಎಲ್ಲ ಯೋಜನೆಗಳಿಂದ  ನಿಜವಾಗಿಯೂ ಮಹಿಳಾ ಸಬಲೀಕರಣ ಸಾದ್ಯವಾಗುತ್ತಿದೆಯೇ ಇದರ ಬಗೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಬಂದಿವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಮಾನತೆ ಎಂಬುದು ಹೆಣ್ಣಿಗೆ ಅವಳ ಮನೆಯಿಂದಲೇ ದೊರೆಯುವುದು ಶುರುವಾಗಬೇಕೇ ಹೊರತು, ಕೇವಲ ಸರ್ಕಾರ ಮಾಡುವ ಕಾನೂನಿನ ಕಾಗದ ಪತ್ರಗಳ ಮೇಲಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ತನ್ನ ಮನೆಯೊಳಗ ಆಕೆಯನ್ನು ಸಮಾನವಾಗಿ ನೆಡೆಸಿಕೊಳ್ಳುತ್ತಿದ್ದೆವೆಯೇ ಎಂಬ ಪ್ರಶ್ನೆ ಪ್ರತಿ ಕುಟುಂಬದಲ್ಲೂ ಬಂದು ಇಣುಕಿ ಹೋಗುತ್ತದೆ. ಹೆಣ್ಣು ಮಕ್ಕಳ ಜೀವನದ ಪ್ರಮುಖ ಘಟ್ಟವೆಂದೆ ಪರಿಗಣಿತವಾದ ಮದುವೆ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಲು ಪೂರ್ತಿಯಾಗಿ ಅಲ್ಲದೆ ಹೋದರು ಸ್ವಲ್ಪ ಮಟ್ಟಿಗಾದರೂ ಸ್ವಾತಂತ್ರ್ಯ ದೊರೆತಿರುವುದು ಖುಷಿಪಡುವ ವಿಚಾರ. ಆದರೆ, ಇದು ಕೇವಲ ವಿಧ್ಯಾವಂತ ಅದರಲ್ಲೂ ಒಳ್ಳೆ ಕೆಲಸದಲ್ಲಿರುವ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇದು ಇನ್ನೂ ಅಸಾಧ್ಯ ಮತ್ತು ಹೆಣ್ಣು ತಾನು ಇಷ್ಟ ಪಟ್ಟವರನ್ನು ಮದುವೆಯಾಗಲು ಬಯಸುವುದು ಮನೆಯ ಮರ್ಯಾದೆ ಹೋಗಲು ಮಾಡುವ ಕೆಲಸವೇ ಆಗಿದೆ, ಇದಕ್ಕೆ ನಿದರ್ಶನವೆಂಬಂತೆ ಅನೇಕ ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯದಾ ಹತ್ಯೆಗಳು.
ಇನ್ನು ಮಹಿಳೆಗೆ ಸಂಭಂಧಿಸಿದ ಅತೀ ಪ್ರಚಲಿತದಲ್ಲಿರುವ ಮಾತೆಂದರೆ ನಾಲ್ಕು ಜನ ಗೌರವ ನೀಡಬೇಕಾದರೆ ಹೆಣ್ಣು ಒಂದಾದರು ಮಗುವನ್ನು ಹೆತ್ತು ತಾಯಿ ಎನಿಸಿಕೊಂಡಾಗ ಮಾತ್ರ ಎಂಬುದು ಇನ್ನೂ ಸಹ ಈ ಸಮಾಜದ ಮಟ್ಟಿಗೆ ನಿಜವೇ ಸರಿ, ಗಂಡು ಮಗು ಬೇಕೇ ಬೇಕೆಂಬುದನ್ನು ಬಹಿರಂಗವಾಗಿ ಹೇಳದೇ ಹೋದರು ಒಳಗೊಳಗೇ ಗಂಡು ಮಗು ಬೇಕೆಂಬುದೇ ಎಲ್ಲರ ಆದ್ಯತೆ. ಮಕ್ಕಳನ್ನು ಹೇರುವುದು ಕೇವಲ ಹೆಣ್ಣಿಗೆ ಮಾತ್ರ ಸಾದ್ಯ ಅದ್ದರಿಂದ ಹೆಣ್ಣು ದೇವತೆಗೆ ಸಮಾನ, ಹೆಣ್ಣು ಜನ್ಮ ಸಾರ್ಥಕವಾಗುವುದು ಒಂದಾದರು ಮಗುವನ್ನು ಹೆತ್ತರೆನೇ ಎಂಬ ಘೋಷಣೆಗಳೊಂದಿಗೆ ಶುರುವಾಗುವ ಮಾತುಗಳು ಅತ್ತೆಯ ಮನೆಯವರು ಮಾತ್ರವಲ್ಲದೆ ತಾಯಿಯ ಮನೆಯವರಿಂದಲೂ ಇನ್ನು ಎಷ್ಟು ದಿನ ಹೀಗೆ ಓಡಾಡಿಕೊಂಡು ಇರುವಿರಿ ಬೇಗ ಒಂದು ಮಗು ಮಾಡಿಕೊಳ್ಳಿ ಎಂಬ ಮಾತುಗಳನ್ನು ಕೇಳುವ ಕಿವಿಗಳು ಮಾತ್ರ ಹೆಣ್ಣಿನವೇ ಆಗಿವೆ. ಇದು ಕೇವಲ ಒಂದು ಉದಾಹರಣೆ ಮಾತ್ರ ಇಂತಹ ಅದೆಷ್ಟೋ ವಿಚಾರಗಳು, ಮನೆಯ ಒಳಗೆ ನಡೆಯುವ ಸನ್ನಿವೇಶಗಳು ಮಹಿಳೆಗೆ ಒಂದು ಸ್ವತಂತ್ರ ಅಸ್ಥಿಸ್ವವಿಲ್ಲ ಎಂದು ಬಿಂಬಿಸುವ ಪ್ರಯತ್ನವೇ ಆಗಿವೆ.
ಕಲಿತ ಹೆಣ್ಣುಮಗಳು ಮನೆಯ ಹೊರಗೂ ಒಳಗೂ ದುಡಿದು ಅಯ್ಯೋ ಏತಾಕ್ಕಾದರು ಕಲಿತು ದುಡಿಯಲು ಹೋದೇನೋ ಎಂಬ ಮೂಕವೇದನೆಯನ್ನು ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ, ವಿಧ್ಯೆ ಎಂಬುದು ವರವಾಗಬೇಕೆ ವಿನಃ ಶಾಪವಾಗಬಾರದು.  ಹೆಣ್ಣಿಗೆ ಇಂತಹ ಅದೆಷ್ಟೋ ಸಮಸ್ಯೆಗಳನ್ನು ಮೀರಿ ಬೆಳೆಯುವ ಶಕ್ತಿ ಇದೆ ಎಂದು ತೋರುವ ಕೆಲ ಮಾದರಿ ಮಹಿಳೆಯರನ್ನು ನೋಡಿ, ತಮ್ಮಲ್ಲೂ ಎಲ್ಲವನ್ನು ಸಾದಿಸುವ ಶಕ್ತಿ ಇದೆ ಎಂದು ನಂಬಿ; ಈ ಸಮಾಜದಲ್ಲಿ ಮಹಿಳಾ ಸಮಾನತೆ ಎನ್ನುವುದು ಮರೀಚಿಕೆ ಎಂದು ತಿಳಿದಿದ್ದರೂ ಸಾವಿರಾರು ವರ್ಷಗಳಿಂದ ದುಡಿಯುತ್ತಲೇ ಬರುತ್ತಿರುವ ಮಹಿಳೆಗೆ ಪ್ರತಿ ದಿನವು ‘ಮಹಿಳಾ ದಿನವೇ’ ಸರಿ.  ಮಹಿಳಾ ಸಮಾನತೆಗೆ ಬೇಕಿರುವುದು ಗಂಡಿನಂತೆ ಹೆಣ್ಣು ಸಹ ಒಬ್ಬ ಮನುಷ್ಯಳು ಎಂಬ ಸರಳ ಸತ್ಯವನ್ನು ಸ್ವೀಕರಿಸಿ ಅವಳನ್ನು ಗೌರವಿಸುವ ಮನಸ್ಸುಗಳೇ ಹೊರತು ಹೆಣ್ಣೆಂದು ತೋರಿಸುವ ಕರುಣೆಯಲ್ಲ. ಈಗ ಹೇಳಿ ಕೇವಲ ಮಾರ್ಚ್ 8 ರಂದು ಮಹಿಳಾ ದಿನ ಎಂದು ಆಚರಿಸಿದರೆ ಸಾಕೆ???