ಪುಟಗಳು

25 November 2011

ನಾವು ಮತ್ತು ನಮ್ಮ ಸಾಮಾಜಿಕ ಜವಾಬ್ಧಾರಿ !!!



ಬಹಳ ದಿನಗಳಾಯಿತು ನನ್ನ ಬ್ಲಾಗ್ ಬರೆದು...ಏನಾದ್ರು ಬರೆಯಬೇಕೆನ್ನುವ ಹಂಬಲ ಆದರೆ ಸಮಯದ ಅಭಾವ...ಆಫೀಸ್ ಕೆಲಸ, ಪಿ.ಎಚ್ ಡಿ ಕೆಲಸಗಳ ಮದ್ಯೆ ಬರೆಯಲು ಬಿಡುವೆ ಇಲ್ಲದಂತಾಗಿದೆ, ಆದರೂ ನನ್ನ ಕೆಲ ಗೆಳೆಯರನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸಂತೋಷವಾಗುತ್ತದೆ ಕಾರಣ ತಮ್ಮ ಕೆಲಸದ ಒತ್ತಡದಲ್ಲಿಯೂ ಅವರ ಬರವಣಿಗೆಗಳನ್ನು ಓದುವ ಭಾಗ್ಯ ನನಗೆ ಸಿಗುತ್ತಿರುತ್ತದೆ ಎಂದು...
ಅಂದ ಹಾಗೆ ವಿಷಯಕ್ಕೆ ಬರುತ್ತೇನೆ ಪ್ರತಿ ಶನಿವಾರ ನನ್ನ ಪಿ.ಎಚ್.ಡಿ ಗೈಡ್ ನೋಡಲು ಮೈಸೂರಿಗೆ ಹೊಗಿಬರುತ್ತಿರುತ್ತೇನೆ, ಹೆಚ್ಚಾಗಿ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಿರುತ್ತೇನೆ. ಪ್ರತಿ ಬಾರಿ ಇಲ್ಲಿಂದ ಹೊರಡುವಾಗ ಮತ್ತು ಮೈಸೂರಿನಿಂದ ಬರುವ ನಾನು ಯೋಚಿಸುವುದು ಒಂದೇ ವಿಚಾರ...ಅದು ಟ್ರೈನ್ ನ ಸ್ವಚ್ಚತೆ ಬಗ್ಗೆ...ಹೌದು ಮೈಸೂರಿನಿಂದ ಟೈನ್ ಹತ್ತುವಾಗ ಇರುವ ಖುಷಿ ನನಗೆ ಇಳಿಯುವಾಗ ಸಿಗುವುದಿಲ್ಲ...ನಮ್ಮ ಜನರು ತಾವು ತಮ್ಮ ಉಪಯೋಗಕ್ಕಾಗಿ ಬಳಸುವ ಸಾರ್ವಜನಿಕ ವಸ್ತುಗಳನ್ನ ಏಕೆ ಇಷ್ಟು ಉಡಾಫೆತನದಿಂದ ನೋಡುತ್ತಾರೆ ಎಂದು ತಿಳಿದಿಲ್ಲ...ಟ್ರೈನ್ ಹತ್ತುವಾಗ ಅದರ ಸ್ವಚ್ಚತೆ ನೋಡಿದರೆ ನಿಜವಾಗಿಯೂ ಖುಷಿ ಎನಿಸುತ್ತದೆ ಆದರೆ ಆ ಖುಷಿ ಬಹಳ ಸಮಯ ಉಳಿಯುವುದಿಲ್ಲ...ಟ್ರೈನ್ ನಲ್ಲಿ ಮಾರಿಕೊಂಡು ಬರುವ ಹೆಚ್ಚು-ಕಡಿಮೆ ಪ್ರತಿಯೊಂದು ತಿಂಡಿ-ತಿನಿಸನ್ನು ಕೊಂಡು ತಿನ್ನುವ ಬಹಳಷ್ಟು ಜನರು ಕಸ ಎಂದು ಎನಿಸಿಕೊಳ್ಳುವ ವಸ್ತುಗಳನ್ನ ತಾವು ಕುಳಿತಲ್ಲೇ ಹಾಕುವುದನ್ನು ನೋಡಬಹುದು...ಕಡಲೆ ಕಾಯಿ ತಿಂದು ಅದರ ಸಿಪ್ಪೆಯನ್ನು ಕಾಲ ಬಳಿಯಲ್ಲಿಯೇ ಹಾಕುವುದಲ್ಲದೆ ಸಿಪ್ಪೆಗಳು ಎದುರಿಗೆ ಕುಳಿತಿರುವ ವ್ಯಕ್ತಿಯ ಪಾದಗಳನ್ನೂ ಸಹ ತೊಳೆಯುತ್ತಿರುತ್ತವೆ...ಇನ್ನು ಮದ್ದೂರ್ ವಡೆ ತಿಂದ ಪೇಪರ್, ಕಾಫಿ-ಟೀ ಕುಡಿದ ಪೇಪರ್ ಕಪ್ ಅನ್ನು ಕಿಟಕಿ ಪಕ್ಕ ಕುಳಿತವರು ಹೊರಗೆ ಹಾಕಿದರೆ ಕೆಲವರು ಏಳಲು ಕಷ್ಟ ಎನ್ನುವ ಮಟ್ಟಿಗೆ ಅದನ್ನು ಅಲ್ಲಿಯೇ ಹಾಕಿ ಬಿಡುತ್ತಾರೆ...
ಇದು ಕೆಳಗೆ ಕುಳಿತವರ ಕಥೆಯಾದರೆ ಇನ್ನು ಮೇಲೆ ಅಂದರೆ ಅಪ್ಪರ್ ಬರ್ತ ನಲ್ಲಿ ಕುಳಿತುಕೊಳ್ಳುವವರ ಕಥೆ ಕೇಳಿ..ಪಾಪ ಮೇಲೆ ಹತ್ತಿ ಕುಳಿತುಕೊಳ್ಳುವ ಕೆಲವವು ಮಹಾಶಯರಿಗೆ ತಮ್ಮ ಚಪ್ಪಲಿ-ಶೂಗಳದ್ದೇ ಚಿಂತೆ ಎಲ್ಲಿ ಕೆಳಗೆ ಬಿಟ್ಟರೆ ಯಾರದ್ರು ಕದ್ದು ಬಿಡುತ್ತಾರೋ ಎಂಬ ಭಯ ಅದಕ್ಕರಾಗಿ ಇವರು ಮೇಲೆ ಹತ್ತುವಾಗ ಚಪ್ಪಲಿ ಶೂ ಹಾಕಿ ಕೊಂಡಿಯೇ ಹತ್ತುವುದು...ಕೆಲವರು ಹತ್ತಿ ಅವಗಳನ್ನು ಬಿಚ್ಚಿ ಕಾಲುಗಳ ಹತ್ತಿರ ಇಟ್ಟುಕೊಂಡರೆ ಇನ್ನು ಕೆಲವರು ಬಿಚ್ಚದೆ ಹಾಕಿಕೊಂಡಿಯೇ ಮಲಗುತ್ತಾರೆ...ಓಡಾಡುವ ಜನರು ತಮ್ಮ ಚಪ್ಪಲಿ-ಶೂ ಕಾಲುಗಳ ದರ್ಶನ ಮಾಡಿ ಕೊಳ್ಳಲಿ ಎಂದು...ನಾವು ಇಳಿದ ಮೇಲೆ ಬೇರೊಬ್ಬರು ಇಲ್ಲಿ ಕುಳಿತುಕೊಳ್ಳಲೋ  ಇಲ್ಲ ಮಲಗಲೋ ಈ ಸೀಟ್ ಅನ್ನು ಉಪಯೋಗಿಸುತ್ತಾರೆ ಎಂಬ ಜ್ಞಾನವೇ ಇರುವುದಿಲ್ಲ.. ಇನ್ನು ಮಲಗುವ ಪರಿ ಕಾಲು ಹಾಕುವ ಜಾಗದಲ್ಲಿ ತಲೆ, ತಲೆ ಇಡುವ ಜಗದಲ್ಲಿ ಕಾಲು ಇಟ್ಟು ಮಲಗುತ್ತಾರೆ. ಪಾಪ ಇನ್ನ್ಯಾರೋ ಬಂದು ತಲೆ ಇಡುವ ಜಾಗದಲ್ಲಿ ತಲೆಯನ್ನೇ ಇಟ್ಟು ಮಲಗಿಕೊಂಡರೆ ಅಷ್ಟೇ ಇದಕ್ಕೂ ಮೊದಲು ಅಲ್ಲಿ ಕಾಲು ಇಟ್ಟು ಮಲಗಿದ್ದವನ ಪಾದದ ದೂಳಿನ ಸ್ಪರ್ಶ....ಇನ್ನು ಆಶ್ಚರ್ಯದ ವಿಚಾರ ಎಂದ ಹೆಚ್ಚು ಜನ ಇಂತಹವರಲ್ಲಿ ವಿದ್ಯಾವಂತರೇ ಆಗಿದ್ದಾರೆ...ಇದೆಲ್ಲ ದರ್ಶನದ ಅಜೋತೆಗೆ ಇಳಿಯಲು ಬಂದಾಗ ನಿಮಗೆ ನೀವು ಮೊದಲು ನೋಡಿದ ಸ್ವಚ್ಚವಾದ  ಟ್ರೈನ್ ತಿಪ್ಪೆ ಗುಂಡಿಯಂತೆ ಕಾಣುತ್ತಿರುತ್ತದೆ.
ಇದೆಷ್ಟು ಟ್ರೈನ್ ಕಥೆಯಾದರೆ ಇನ್ನು ನಮ್ಮ ಬೃಹತ್ ಬೆಂಗಳೂರಿನ ಕಥೆಯು ಅಷ್ಟೇ...ಅನೇಕ ಬಾರಿ  ಬಿ ಎಮ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುವಾಗ ನಾನು ಇಂತಹ ದೃಶ್ಯಗಳನ್ನು ಕಂಡಿದ್ದೇನೆ...ಮಹಿಳೆಯರು ಬಸ್ಸಿನಲ್ಲಿಯೇ ತಾವು ಅಂದಿನ ಅಡಿಗೆಗೆಂದು  ಖರೀದಿಸಿದ ತರಕಾರಿ, ಸೊಪ್ಪನ್ನು ಸ್ವಚ್ಚಗೊಳಿಸುತ್ತ ಕೋರುವುದು...ಮೊನ್ನೆ ಕೂಡ ಇಂತಹದ್ದೇ ದೃಶ್ಯ...ಮಹಿಳೆಯೊಬ್ಬಳು ತಾನು ಕೊಂಡಿದ್ದ ಸೊಪ್ಪನ್ನು ಬಸ್ಸಿನಲ್ಲಿಯೇ ಸ್ವಚ್ಚ ಮಾಡುತ್ತಾ ಕುಳಿತಿದ್ದರು...ನಾನು ಎದುರಿಗೆ ನಿಂತಿದ್ದ ಕಾರಣ ಅವರು ನನ್ನನು ನಾನು ಅವರನ್ನು ನೋಡುತ್ತಿದ್ದೆವು, ಆಕೆ ಸೊಪ್ಪನ್ನು ಬಿಡಿಸಿ ಚೆನ್ನಾಗಿರುವುದನ್ನು ಕವರ್ ಗೆ ಹಾಕಿ ಕೊಳ್ಳುತ್ತಾ ಚೆನ್ನಗಿಲ್ಲದನ್ನು ಒಮ್ಮೆ ಕೆಳಗೆ ಮತ್ತೆಮ್ಮೋ ಕಿಟಕಿಯಿಂದ ಆಚೆಗೆ ಹಾಕುತ್ತಿದ್ದಳು....ಇದನ್ನು ನೋಡುತ್ತಾ ನಿಂತಿದ್ದ ನಂಗೆ ಕೋಪ ಬರುತ್ತಿರುವುದನ್ನು ಗಮನಿಸಿದ ಅಆಕೆ ತನ್ನೆ ಕೆಲಸವನ್ನೂ ಮುದುವರೆಸುತ್ತಿದ್ದಳು...ಆಕೆ ಹಾಕುತ್ತಿದ್ದ ಕಸ ಕಿಟಕಿಯಿಂದ ಹೊರಗೆ ಯಾವುದೊ ಒಬ್ಬ ವಾಹನ ಸವಾರನ ಮೇಲೆ ಬಿಳುತ್ತಿರಬಹುದೆಂಬ ಪರಿವೆ ಇಲ್ಲವೇ?? ನಾನು ಒಪ್ಪುತ್ತೇನೆ ಮನೆ ಹೊರಗು-ಒಳಗೂ ದುಡಿಯುವ ಮಹಿಳೆಗೆ ಇರುವ ಕಷ್ಟ ಮತ್ತು ಸಮಯದ ಅಭಾವವಿದೆ ಎಂದು....ನಾನು ಕೇಳುವ ಪ್ರಶ್ನೆ ಬಸ್ ವ್ಯವಸ್ಥೆಯಿಲ್ಲದ್ದರೆ ಸರ್ಕಾರವನ್ನು ದೂರುವ ನಾನು ನಮಗೆಂದೇ ಇರುವ ಬಸ್, ಟ್ರೈನ್ ಸಾರ್ವಜನಿಕ ಸ್ವತ್ತುಗಲ್ಲನ್ನು ನಾವು ನೋಡಿಕೊಳ್ಳುವ ರೀತಿ ಇದೇನಾ? ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ, ಬೈಯ್ಯುವ ನಾವು...ನಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಯಾವಾಗ?? ಇದಕ್ಕೆನಾದ್ರು ಒಂದು ಇಲಾಖೆಯನ್ನು ನೇಮಿಸಬೇಕೆ??ಸಾಮಾಜಿಕ ಜವಾಭ್ದಾರಿ ಎಂಬುದನ್ನು ಬಲವಂತವಾಗಿ ನಮ್ಮಲ್ಲಿ  ತುಂಬಬೇಕೇ? ಎಲ್ಲ ಎಚ್ಚರಿಸಬೇಕೆ?? ಟ್ರೈನ್ ನಲ್ಲಿಯೇ ತಿಂದು ಅಲ್ಲಿಯೇ ಹಾಕುವ ಜನರು...ಬಸ್ಸಿನಲ್ಲಿಯೇ ಕಸ ಹಾಕುವ ಜನರು ತಮ್ಮ  ಮನೆಗಳಲ್ಲಿಯೂ ಹೇಗೆ ನೆದೆದುಕೊಲ್ಲುತ್ತರೆಯೇ ??
ಒಮ್ಮೆ ಯೋಚಿಸಿ ಎಲ್ಲದಕ್ಕೂ ನಾವು ಸರ್ಕಾರರವನ್ನು ದೂರುತ್ತೇವೆ.....ನಮಗೆ ಸೌಲಭ್ಯ ನೀಡಿಲ್ಲ ..ಅದಿಲ್ಲ ಇದಿಲ್ಲ ಎಂದು ಆದರೆ ಇರುವ ಸವಲತ್ತುಗಳನ್ನೂ ಎಷ್ಟರ ಮಟ್ಟಿಗೆ ಜೋಪನಮಾಡಿದ್ದೇವೆ...ಇಲ್ಲ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಎಂದಾದರೂ ನೆದಡಿದುಕೊಂದಿದ್ದೆವೆಯೇ...??

20 July 2011

ಟಿವಿ ಕಾರ್ಯಕ್ರಮಗಳು ಮತ್ತು ನಮ್ಮ ಅಭಿಪ್ರಾಯ


ಹಿಂದೆ ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳು ---- ಅಯ್ಯೋ ಹಿಂದಿನ ವಾರ ಏನಾಯಿತೆಂದು ಮರೆತು ಹೋಗುತ್ತೇವೆ. ಆದರು ಚೆನ್ನಾಗಿರುತ್ತಿದ್ದವು....
ಮೆಗಾ ಧಾರವಾಹಿಗಳು ---- ದಿನಾ ನೋಡುವುದು ಕಷ್ಟ ಕಾರಣ, ನೆನ್ನೆ ಎಪಿಸೋಡ್ ಅನ್ನೇ ಎಳೆಯುತ್ತಿರುತ್ತಾರೆ.....
ಮಾಯಾಮೃಗ, ಮಲೆಗಳಲ್ಲಿ ಮಧುಮಗಳು ಇತ್ಯಾದಿ ಯಂತಹ ಧಾರಾವಾಹಿಗಳು ಮತ್ತೆ ಬರುವುದಿಲ್ಲ.
ನಗೆ ಧಾರವಹಿಗಳು ---- ನೋಡುತ್ತಿರುತ್ತೇವೆ ಆದರು ನಗು ಬರುವುದಿಲ್ಲ
ರಿಯಾಲಿಟಿ ಶೋಗಳು ----- ಒಂದು ಚಾನೆಲ್ ಮೇಲೆ ಮತ್ತೊಂದು ಚಾನೆಲ್ ಸ್ಪರ್ಧೆಗಿಳಿದಂತೆ ಬರಿ TRP ಹೆಚ್ಚಿಸಿಕೊಳ್ಳಲು ಮಾಡುವ ಗಿಮಿಕ್ಕು,  
ಫ್ಯಾಶನ್ ಷೋಗಳು ------ ಎಂಥಹ ಕಾಲ ಬಂತಪ್ಪ...ಬಟ್ಟೆಗೆ ಬರ ???
ಟಿವಿ ನ್ಯೂಸ್ ಗಳು ------ ಅಯ್ಯೋ ಹೇಳಿದ್ದನ್ನೇ ಹೀಳುತ್ತಿರುತ್ತವೆ...ತೋರಿಸಿದ್ದನ್ನೇ ತೋರಿಸುತಿರುತ್ತವೆ.....ಹೊಸ ಸುದ್ದಿಯೇ ಇಲ್ಲವೇ ಇವರಿಗೆ....
ನ್ಯೂಸ್ ಚಾನೆಲ್ –----- ವಿವಿಧ ಪಕ್ಷಗಳ ರಾಜಕೀಯ ವ್ಯಕ್ತಿಗಳ ಜೊತೆಗಿನ ಚರ್ಚೆ ಮತ್ತು ಸಂಭಾಷಣೆ ------ ಅಯ್ಯೋ ದಿನ ಇವರುಗಳು  ಮಾಡುವುದನ್ನು ನಾವು ಪರೋಕ್ಷವಾಗಿ ನೋಡುತ್ತಿಲವೇ ಈಗ ಇವರ ಜಗಳವನ್ನು ಅದಕ್ಕೆ ವಿವರಣೆಯನ್ನ ನೇರವಾಗಿ ನೋಡಬೇಕೆ ??
ಬೃಹತ್ ಬ್ರಹ್ಮಾಂಡ ------ ಕರ್ಮ ಕಾಂಡ....
ಬದುಕು ಜಟಕಾಬಂಡಿ ----- ಸರ್ಕಾರೀ ಕೌಟುಂಬಿಕ ನ್ಯಾಯಾಲಯದ ಜೊತೆಗೆ ಸ್ಪರ್ದೆ....ಯಾರು ಹೆಚ್ಚು ಕೇಸು ಮುಗಿಸುತ್ತಾರೆ ಎಂಬಂತೆ...  
ಇನ್ನು ವಾರದ ಕೊನೆಯಲ್ಲಿ ಹಾಕುವ ಚಲನಚಿತ್ರಗಳು ------ ಹಾಕಿದ್ದನ್ನೇ ಹಾಕುತ್ತಾರೆ ಜೊತೆಗೆ ಅಯ್ಯೋ ಎರಡುವರೆ ಘಂಟೆಯಲ್ಲಿ ಮುಗಿಯುವ ಸಿನಿಮ ನೋಡಲು ಮೂರುವರೆ ಗಂಟೆ ಕೂತು ಯಾರು ನೋಡುತ್ತಾರೆ. 

27 May 2011

ನಮಗಿರುವ ಕನ್ನಡ ಭಾಷಾ ಅಭಿಮಾನವೆಷ್ಟು ???

ಊಹಿಸಲು ಅಸಾಧ್ಯ ಮಾಧ್ಯಮಗಳು ಇಂತಹ ಕಾರ್ಯಕ್ರಮಗಳನ್ನು ಮನರಂಜನೆ ಎಂಬ ಹೆಸರಿನಲ್ಲಿ ಪ್ರದರ್ಸಿಸುತ್ತಿರುವುದು. ಒಂದು ಕಡೆ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ಸಿಕ್ಕರೂ ಕನ್ನಡಕ್ಕಾಗಿ, ಭಾಷೆಯ ಉಳಿಯುವಿಕೆಗಾಗಿ ಅನೇಕ ಸಂಘಟನೆಗಳು ಕಾರ್ಯನಿರತವಾಗಿದ್ದರೆ ಮತ್ತೊಂದು ಕಡೆ ನಮ್ಮವರೇ ಕನ್ನಡ ಭಾಷೆಯನ್ನೂ ಹೇಗೆ ಬೇಕೋ ಹಾಗೆ ಅತಿ ಕೆಟ್ಟದಾಗಿ ಬಳಸುತ್ತ ಅದಕ್ಕೆ ಇರುವ ಪ್ರಾಮುಕ್ಯತೆಯನ್ನು ಮರೆತಿದ್ದಾರೆ.

ಇತ್ತೀಚಿಗೆ ರೇಡಿಯೋ FM ಗಳು ಒಂದರ ಮೇಲೊಂದು ಸ್ಪರ್ಧೆಗಿಳಿದಂತೆ ಹೊಸ ಹೊಸ ಕಾರ್ಯಕ್ರಮಗಳನ್ನೂ ತರುತ್ತಿದ್ದು ಜನರನ್ನು ಆಕರ್ಷಣೆಯೇ ಮುಖ್ಯ ಗುರಿಯಾಗಿರಿಸಿಕೊಂಡು ತಾವು ಮಾತನಾಡುತ್ತಿರುವ ಭಾಷೆಯಲ್ಲಿ ಬಳಸುತ್ತಿರುವ ಪದಗಳ ಅರಿವೇ ಇಲ್ಲದಂತಾಗಿದೆ. FEVER 104 FM ನ ಮಿಂಚು ಮಿನುಗು ನೀತಿ ಮತ್ತು ನಾಟಿ ನವೀನ ಶೋ ನಲ್ಲಿ ಅವರಿಬ್ಬರು ಬಳಸುವ ಪದಗಳು ಮತ್ತು ಕನ್ನಡದ ಹೆಸರಾಂತ ನಟಿ ಕಲ್ಪನಾರ ದ್ವನಿಯಲ್ಲಿ ಮಾತನಾಡುವ ಮೋನ ಎಂಬ ದ್ವನಿ ನವೀನ ಮತ್ತು ಮೋನರ ನಡುವೆ ನಡೆಯುವ ಸಂಬಾಷಣೆ ಕೇಳಿ, ಸಾವಿರಾರು ಜನರು ನಮ್ಮನ್ನು ಆಲಿಸುತ್ತಿದ್ದರೆ ಎಂಬ ಅರಿವಿಲ್ಲದವರಂತೆ ಅಶ್ಲೀಲ ಪದಗಳ ಬಳಸಿ ನಂತರ ಅದಕ್ಕೆ ಬೇರೆ ರೀತಿಯ ಸಂಭಾಷಣೆ ನೀಡುವ ಇವರನ್ನು ಏನೆಂದು ಕರೆಯಬೇಕು? ಮನರಂಜನೆಯ ಹೆಸರಿನಲ್ಲಿ ಇದನ್ನ್ನು ಮಾಡುವುದು ಎಷ್ಟು ಸರಿ? ಇದನ್ನು ಕೇಳುವ ನಾವು ಅವರು ಮಾಡಿದ್ದೆ ಮನರಂಜನೆ ಎಂದು ಕೇಳಿ ಸುಮ್ಮನಾಗುವುದು ಏಕೆ? ಕನ್ನಡ ಸಿನಿಮ ಜಗತ್ತು ಅಷ್ಟೇ ಅಲ್ಲ ಕರ್ನಾಟಕ ಜನತೆ ಗೌರವದಿಂದ ಕಾಣುವ ಕಲ್ಪಾನರ ದ್ವನಿ ಅನುಸರಿಸು ಅಶ್ಲೀಲವಾಗಿ ಮಾತನಾಡುವ ಇಂಥಹ ಒಂದು ಷೋ ಅನ್ನು ಯಾರು ವಿರೋಧಿಸದೆ ಇರುವುದು ಹೇಗೆ? ಯಾರೋ ಹೊರಗಿನ ಜನತೆ ಕನ್ನಡ ಭಾಷೆಯನ್ನೂ ಹೀಯಾಳಿಸಿದರು, ಎಂದು ಹೋರಾಟಕ್ಕೆ ಇಳಿಯುವ ನಾವು ಇಂಥಹವನೆಲ್ಲ ಏಕೆ ಸಹಿಸಿಕೊಳ್ಳಬೇಕು? ಕೊನೆ ಪಕ್ಷ ಅಲ್ಲಿಯೇ ಕೆಲಸಮಾಡುವ ಕನ್ನಡಿಗರಿಗಾದರೂ ಇದರ ಅರಿವುಬೇಡವೇ?

ಇದು ರೇಡಿಯೋ ಪುರಾಣವಾದರೆ ಇನ್ನು ಜೀ ಟಿವಿ ಯಲ್ಲಿ ಪ್ರಸಾರವಾಗುವ ಪರದೇಶದಲ್ಲಿ ಪರದಾಟ ರಿಯಾಲಿಟಿ ಶೋವ್ನಲ್ಲಿ ನೆನ್ನೆ ನೋಡಿದ ಒಂದು ದೃಶ್ಯ, ಷೋ ನಲ್ಲಿ ಭಾಗವಹಿಸಿರುವವರನ್ನ ಇಲ್ಲಿಂದ ವಿದೇಶಕ್ಕೆ ಕದೆದುಕೊಂಡು ಹೋಗಿ ಅಲ್ಲಿ ವಿದೇಶಿಗರ ಮುಂದೆ ಕನ್ನಡ ಹಾಡುಗಳನ್ನೂ ಹಾಡಿಸುತ್ತ ವಿದೇಶಿಗರಿಂದ ದುಡ್ಡು ಕೇಳುವ ಟಾಸ್ಕ್... ಒಂದೇ ಮಾತಿನಲ್ಲಿ ಹೇಳುವುದಾದರೆ ವಿದೇಶಿಗರ ಮುಂದೆ ಬಿಕ್ಷೆ ಬೇಡಿ ಯಾರು ಹೆಚ್ಚು ದುಡ್ಡು ಸಂಪಾದಿಸುತ್ತರೋ ಅವರು ಗೆಲ್ಲುತ್ತಾರೆ...ಇಂಥಹ ಶೋಗಳನ್ನು ಪ್ರಸಾರ ಮಾಡುವಾಗ ಹಿಂದೆ-ಮುಂದೆ ಯೋಚಿಸದೆ ಇಷ್ಟ ಬಂದ ಟಾಸ್ಕ್ಗಳನ್ನೂ ಇಟ್ಟು ಆಡಿಸುವ ಅಗತ್ಯವಾದರು ಏನಿದೆ? ಕನ್ನಡ ಕನ್ನಡ ಇಂದು ಹೊಡೆದಾಡುವ ನಾವು ನಮ್ಮ ಭಾಷೆಗೆ ನೀಡುತ್ತಿರುವ ಗೌರವವಾದರೂ ಏನು? ಇನ್ನಾದರೂ ಮಾಧ್ಯಮಗಳು ಕೇವಲ ಹೆಸರು ಮಾಡುವ ಮತ್ತು TRP ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾತ್ರ ನೋಡದೆ, ನಮ್ಮ ಭಾಷೆ, ಅದರ ಬಳಕೆ ಮತ್ತು ಪ್ರಮುಖ್ಯತೆಯನ್ನು ಅರಿತು ನೆಡೆದು ಕೊಳ್ಳುವುದು ಅಗ್ಯತ್ಯವಾಗಿದೆ....

10 January 2011

ವ್ಯಕ್ತಿ, ವ್ಯವಸ್ಥೆ ಮತ್ತು ಭಷ್ಟಾಚಾರ...

 ಸ್ನೇಹಿತರೆ ನನ್ನದೊಂದು ಸಣ್ಣ ಪ್ರಶ್ನೆ...ಪ್ರತಿ ದಿನ ನಾವು TV, ದಿನಪತ್ರಿಕೆಗಳಲ್ಲಿ ಭ್ರಷ್ಟಾಚಾರ, ಲಂಚ, ಹಗರಣಗಳು, ಇತ್ಯಾದಿ ಸಮಸ್ಯೆಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಆರೋಪ ಮತ್ತು ಪ್ರತ್ಯಾರೋಪಗಳನ್ನು ಕೇಳಿ ರೋಸಿಹೊಗಿದ್ದೇವೆ...ಇದಕ್ಕೆ ಸಂಭಂದಿಸಿದಂತೆ ನನ್ನ ಒಂದು ಸಣ್ಣ ಪ್ರಶ್ನೆಯೆಂದರೆ ವ್ಯಕ್ತಿಯಿಂದ ವ್ಯವಸ್ಥೆ ಹಾಳೋ? ಅಥವಾ ವ್ಯವಸ್ಥೆಯಿಂದ ವ್ಯಕ್ತಿ ಹಾಳೋ? ಹಾಳಾಗಿರೋ ವ್ಯವಸ್ಥೆಯಿಂದ ವ್ಯಕ್ತಿ ಹಾಳಗುತ್ತಿದ್ದನೋ ಅಥವಾ ವ್ಯಕ್ಥಿಯಿಂದಲೇ ವ್ಯವಸ್ಥೆ ಹಾಳಗುತ್ತಿದೆಯೋ? ಅನೇಕ ಜನರು ಮಾತನಾಡುವಾಗ...ಮಾತಿನ ಮಧ್ಯೆ ಅಯ್ಯೋ ಬಿಡಿ ನಮ್ಮ ವ್ಯವಸ್ಥೆಯೇ ಹಾಗಿದೆ, ಇಲ್ಲಿ ಲಂಚ ಕೊಡದೆ ಏನು ಆಗುವುದಿಲ್ಲ ಮತ್ತು ಲಂಚ ಪಡೆಯದೇ ಏನು ಮಾಡುವುದಿಲ್ಲ ಇನ್ನು ಜನರು ಬಹಳಷ್ಟು ಮಂದಿ ಇದ್ದಾರೆ.....ಲಂಚ ತೆಗೆದುಕೊಳ್ಳುವವನು ಒಬ್ಬ ವ್ಯಕ್ತಿ ಆದರೆ ಆ ವ್ಯಕ್ತಿಯ ಸುತ್ತಲು ವ್ಯವಸ್ಥೆ ಸುತ್ತುತಿರುತ್ತದೆ....ಇಲ್ಲ ವ್ಯವಸ್ಥೆಯೇ ಭ್ರಷ್ಟ ಎಂದಾದರೆ ಅದರೊಳಗಿನ ಎಲ್ಲಾ ವ್ಯಕ್ತಿಗಳು ಭ್ರಷ್ಟರೇ ಆಗಿರುತ್ತಾರೆ...ಇಡೀ ಭ್ರಷ್ಟ ವ್ಯವಸ್ಥೆಯಲ್ಲಿ ಭ್ರಷ್ಟರಲ್ಲದ ವ್ಯಕ್ತಿಗಳು ಹೇಗೆ ತಮ್ಮ  ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ....ಒಂದು ಸಮಾಜದ ಅಭಿವೃದ್ದಿಗೆ ಅಥವಾ ಅಧಃಪತನಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡು ಕೂಡ ಜೊತೆ-ಜೊತೆಯಾಗಿ ಕಾರ್ಯ ನಿರ್ವಹಿಸುತ್ತವೆಯೇ?

ಇತ್ತೀಚಿಗೆ ನಡೆದ ಮತ್ತು ನೆಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಇದನ್ನು ಹೋಲಿಸಿ ನೋಡುವ ಒಂದು ಸಣ್ಣ ಪ್ರಯತ್ನ....ಭೂಹಗರಣಗಳಿಗೆ ಕುರಿತಂತೆ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನ ನೇರಕ್ಕೆ ಮಾತನಾಡಿದ್ದು ನಮೆಗೆಲ್ಲ ತಿಳಿದೇ ಇದೇ...ಯಡಿಯೂರಪ್ಪನವರು ಭೂಹಗರಣಗಳನ್ನು ಮಾಡಿದ ಮೊದಲ ವ್ಯಕ್ಥಿಯೇನಲ್ಲ ಅದಕ್ಕೆ ಹಿಂದೆ ಇದ್ದ JDS, Congress ಪಕ್ಷಗಳು ಕೂಡ ಇಂಥಹ ಹಗರಣಗಳನ್ನು ಮಾಡಿವೆ, ಯಾರೂ ಮಾಡದ್ದನ್ನ ನಾವೇನು ಮಾಡಿಲ್ಲ ಎಂಬುದು ಇವರ ದೂರುಗಳು...ಹಾಗಾದರೆ ಪ್ರಾಮಾಣಿಕವಾಗಿ ದುಡಿಯುವ ಪಕ್ಷ ಯಾವುದು?? ಪ್ರಾಮಾಣಿಕ ವ್ಯಕ್ತಿಗಳು ಯಾರು?? ಅಂದರೆ ಈ ಎಲ್ಲಾ ಹಗರಣಗಳ ಹಿಂದೆ ವ್ಯಕ್ತಿಗಳೇ ಇದ್ದರೂ ಸಹ ಇಡಿಯಾಗಿ ವ್ಯವಸ್ಥೆಯೇ ಭ್ರಷ್ಟ ಎನಿಸಿಬಿಡುತ್ತದೆ.....ಇಗ ನಾವು ವ್ಯವಸ್ಥೆಯನ್ನು ದೂರಬೇಕೋ ಅಥವಾ ವ್ಯವಸ್ಥೆಯನ್ನು ತಾನೆ ಸೃಷ್ಟಿಸಿ, ತಾನೆ ಅದನ್ನು ಹಾಳು ಮಾಡುವ ವ್ಯಕ್ಥಿಯನ್ನೋ?? ಇವೆರಡನ್ನೂ ಇಡಿಯಾಗಿ ನೋಡಿದರೆ ಕಾಣುವುದು ವ್ಯವಸ್ಥೆಯ ಹಿಂದೆ ಇರುವ ವ್ಯಕ್ತಿ ಮತ್ತು ವ್ಯಕ್ತಿಯ ಹಿಂದೆ ಇರುವ ವ್ಯವಸ್ಥೆ.... ವ್ಯವಸ್ಥೆಯನ್ನು ಸೃಷ್ಟಿಸಿದ ವ್ಯಕ್ತಿಯೇ ಅದನ್ನು ಹಾಳು ಮಾಡುತ್ತಿದ್ದಾನೆ... ನಮ್ಮ ಜನರು ಮಾತನಾಡುವಾಗ ಸಾಮಾನ್ಯವೇನೋ ಎಂಬಂತೆ ಹೇಳುವ ಅಭಿಪ್ರಾಯ...ನಮ್ಮ ದೇಶವನ್ನು ಹಾಳು ಮಾಡುತ್ತಿರುವವರು ರಾಜಕೀಯ ವ್ಯಕ್ತಿಗಳು ಎಂದು...ಎಲ್ಲಾ ತಪ್ಪುಗಳನ್ನು ರಾಜಕೀಯ ವ್ಯಕ್ತಿಗಳ ಮೇಲೆ ಹೇರುವುದು ಸರಿಯೇ??  ಇದರಲ್ಲಿ ನಮ್ಮ ಪಾಲೆಷ್ಟು ಅವರ ಭ್ರಷ್ಟಾಚಾರಕ್ಕೆ ನೇರವಾಗಿಯೋ ಅಥವ ಪರೋಕ್ಷವಾಗಿಯೋ ನಾವು ಸಹಕರಿಸುತ್ತಿಲ್ಲವೇ?? ನಾವು ಕೂಡ ಎಷ್ಟು ದುಡ್ಡು ಕೊಟ್ಟಾದರೂ ಸರಿ ನಮ್ಮ ಕೆಲಸವಾಗಬೇಕೆಂದು ಬಯಸುವುದಿಲ್ಲವೇ? ಅಂತೆಯೇ ಅವರು ಸಹ ತನಗೆ ಏನು ಸಿಗುತ್ತದೆಂದು ಯೋಚಿಸುವಾಗ ಕೇವಲ ಅವರನ್ನು ಮಾತ್ರ ಭ್ರಷ್ಟರೆಂದು ಕರೆದು ನಮ್ಮನ್ನು ಅವರಿಗೆ ಬಲಿಪಶುಗಳೆಂದು ಹೇಳಿಕೊಳ್ಳುವಲ್ಲಿ ಯಾವ ಅರ್ಥವೂ ಇಲ್ಲ..ಇಲ್ಲಿ ಎಲ್ಲರು ಬಯಸುವುದು ಸ್ವ-ಹಿತವನ್ನು ಮಾತ್ರ ಅಲ್ಲವೇ??? ಹಾಗಾದರೆ ಸಮಾಜದ ಹಿತವನ್ನು ಬಯಸುವವರು ಯಾರು??  ಇಂದು ಪ್ರಜಾಪ್ರಭುತ್ವ ಯಾವ ಹಂತ ತಲುಪಿದೆಯೆಂದರೆ ಇಲ್ಲಿ ಯಾರಿಗೂ ಆದರ್ಶಗಳು ಬೇಕಿಲ್ಲ... ಅವುಗಳಿಂದ ಹೊಟ್ಟೆ ತುಂಬುವುದಿಲ್ಲ, ಅದಕ್ಕಾಗಿ ತಮ್ಮ ಚಿಕ್ಕ ಚಿಕ್ಕ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ದೊಡ್ಡ ದೊಡ್ಡ  ಕೆಲಸಗಳನ್ನು ಮಾಡುತ್ತಿರುತ್ತಾರೆ... ಇಂದು ಭ್ರಷ್ಟಾಚಾರದ ಬೇರುಗಳು ಎಲ್ಲೆಲ್ಲಿಯೂ ಹಬ್ಬಿ ಬಿಟ್ಟಿದೆ, ಮನೆಯಿಂದ ಹಿಡಿದು - ಸಮಾಜದವರೆಗೆ. ಹಾಗೆ ಕೇಳಿದವೆರೆಲ್ಲ ದೂರುವುದು ವ್ಯವಸ್ಥೆ ಇರುವುದೇ ಹಾಗೆ ಬಿಡಿ ಇನ್ನುತ್ತ ಅದೇ ವ್ಯವಸ್ಥೆಯಲ್ಲಿನ ವ್ಯಕ್ತಿಗಳನ್ನು ಬೆರಳು ಮಾಡಿ ತೋರಿಸುವ ನಾವು ಇಂಥಹ  ಭ್ರಷ್ಟಾಚಾರಿ ವ್ಯವಸ್ಥೆಯನ್ನು ಬದಯಲಿಸುವುದಕ್ಕೆ ಎಂದಾದರೂ ಮನಸ್ಸು ಮಾಡಿದ್ದೆವೆಯೇ ?? ಹೋಗಲಿ ಅದರ ವಿರುದ್ದ ಮಾತನಾಡುವ ದೈರ್ಯವನ್ನಾದರೂ ಮಾಡಿದ್ದೆವೆಯೇ ?? ಮಾತನಾಡುವುದು ಕೇವಲ ಮನೆಯಲ್ಲಿ, ಸ್ನೇಹಿತರ ಮಧ್ಯೆ, ಗುಂಪು ಗುಂಪಾಗಿ ನಿಂತಾಗ ಕಾಲಹರಣದ ಚರ್ಚೆಯ ವಿಷಯಗಳಾಗಿ ಮಾತನಾಡುತ್ತ ಅಲ್ಲೇ ಮರೆತು ಬಿಡುತ್ತೇವೆ...ವ್ಯವಸ್ಥೆಯನ್ನು ಸೃಷ್ಟಿಸಿದ್ದು ವ್ಯಕ್ತಿ, ಅದು ಹಾಳಾಗುತ್ತಿರುವುದು ವ್ಯಕ್ತಿಯಿಂದ ಎಂದಾಗ ವ್ಯಕ್ಥಿಯಿಂದಲೇ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ? ಇನ್ನು ಇತ್ತೀಚಿನ ಚುನಾವಣ ಪ್ರಕ್ರಿಯೆಗಳನ್ನು ನೋಡಿದಾಗ ನಮ್ಮ ಪ್ರಜಾಪ್ರಭುತ್ವ ಮತ್ತು ಮತದಾರನ ನೈತಿಕತೆಯ ಬಗ್ಗೆ ಅಸಹ್ಯ ಎನಿಸುವಷ್ಟು ಬೇಸರವಾಗುತ್ತದೆ....ಚುನಾವಣೆಯಲ್ಲಿ ಹಣ-ಹೆಂಡ ಹಂಚುವುದು ಇದೇ ಮೊದಲಲ್ಲ ಆದರೆ ಇತ್ತೀಚಿಗೆ ಹಣ-ಹೆಂಡದ ಜೊತೆಗೆ ಸೀರೆ, ಪಾತ್ರೆ, ಕೋಳಿ, ಅಕ್ಕಿ, ಮೂಗುಬೊಟ್ಟು, ಕೊನೆಗೆ ದೇವರ ವಿಗ್ರಹಗಳನ್ನೂ ಹಂಚುವುದು ಶುರುವಾಗಿಬಿಟ್ಟಿದೆ. ಇಂದು ವ್ಯವಸ್ಥಿತವಾಗಿ  ಸಮಾಜದ ಅಭಿವೃದ್ದಿಗಾಗಿ  ಮತ "ದಾನ" ವಾಗಿ ಉಳಿಯದೆ ಮತ "ಮಾರಾಟ"ವಾಗುತ್ತಿದೆ. ಹೇಗೆ ಮಾಡುವ ಬದಲಿಗೆ ಸಾರ್ವಜನಿಕವಾಗಿ ಮತಗಳನ್ನು ಹರಾಜು ಹಾಕುವುದೇ ಉತ್ತಮ ಎನಿಸುತ್ತದೆ. ಕೊನೆ ಪಕ್ಷ ಒಬ್ಬರನ್ನೊಬ್ಬರು ಒಳಗಿಂದೊಳಗೆ ದ್ವೇಷಿಸಿ, ಕೊಲೆ, ಅಪಹರಣಗಳಂತಹ ಕಾರ್ಯಗಳು ಸಂಬವಿಸುವುದು ಕಡಿಮೆಯಾಗುತ್ತದೆ. ನೇರವಾಗಿ ಇಷ್ಟು  ದೊಡ್ದು ಕೊಟ್ಟು ನಾನು ಮತದಾರರನ್ನು  ಖರಿದಿಸಿದ್ದೇವೆ ನೀವು ಬೇಕಾದರೆ ಅದಕ್ಕಿಂತ ಹೆಚ್ಚಿನ ದುಡ್ಡು ಕೊಟ್ಟು ಖರಿದಿಸಿ ಎಂದು ನೇರವಾಗಿ ಹೇಳಬಹುದು ಮತದಾರನು ಸಹ ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಆ ಪಕ್ಷಕ್ಕೆ ಮತ ಹಾಕ ಬಹುದು  ಅಲ್ಲವೇ?? ನೋಡಿ ಎಲ್ಲಿಗೆ ಬಂದು ತಲುಪಿದೆ ನಮ್ಮ ವ್ಯವಸ್ಥೆ ಮತ್ತು ವ್ಯಕ್ತಿಗಳು....ನಮ್ಮ ಸಮಾಜದಲ್ಲಿ ನೈಜ ಪ್ರಜಾಪ್ರಭುತ್ವ ಅರಳುವುದದರು ಎಂದು ???           

21 December 2010

ಕಳೆಯುತಿಹುದು ಮತ್ತೊಂದು ವರ್ಷ....ಮಾಡಿದ ಸಾಧನೆ...???

ಇಲ್ಲಿ ನಾನು ನನ್ನ ಬಗ್ಗೆಯಾಗಲಿ ಅಥವಾ ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯ ಬಗ್ಗೆ ಬರೆಯುತ್ತಿಲ್ಲ ಬದಲಿಗೆ ಕೊಳೆತು ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ಮತ್ತು ಪಕ್ಷಗಳ ಸಾಧನೆಗಳ ಬಗ್ಗೆ ಬರೆಯುತ್ತಿದ್ದೇನೆ. ಇನ್ನೇನು ಕೆಲವು ದಿನಗಳು ಮಾತ್ರ ಉಳಿದಿದೆ 2010  ಕಳೆದು ಹೋದ ವರ್ಷಗಳ ಸಾಲಿಗೆ ಸೇರಿಬಿಡುತ್ತದೆ.... 2010 ರಲ್ಲಿ ಆಗಿಹೋದ ಮತ್ತು ಇನ್ನು ನೆಡುತ್ತಿರುವ ಘಟನೆಗಳು ನಮ್ಮ ಪ್ರಜಾಪ್ರಭುತ್ವವನ್ನು ತಲೆ ತಗ್ಗಿಸುವಂತೆ ಮಾಡಿದೆ... ಬಹುಷಃ ಈ ವರ್ಷದಲ್ಲಿ ಕಂಡುಬಂದಂತಹ ಹಗರಣಗಳು ಬೇರೆ ಇನ್ಯಾವ ವರ್ಷದಲ್ಲೂ ಕಂಡುಬಂದಿಲ್ಲ ಎಂದು ಹೇಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗರಣಗಳು ಒಂದರ ಮೇಲೊಂದಂತೆ ಬೆಳಕಿಗೆ ಬರುತ್ತಿದ್ದರೆ, ಇತ್ತ ಸಾಮಾನ್ಯ ಮನುಷ್ಯ ತನ್ನ ಜೀವನ ಸಾಗಿಸಲು ಪರದಾಡುತ್ತಿದ್ದಾನೆ... ಒಂದೊಂದು ಹಗರಣಗಳಲ್ಲಿ ಭ್ರಷ್ಟರು ನುಂಗಿ ನೀರು ಕೂಡಿರುವ ಹಣವೆಷ್ಟು?? ಇತ್ತೀಚಿಗೆ ಬೆಳಕಿಗೆ ಬಂದ 2G ಸ್ಪೆಕ್ಟ್ರಂ ಹಗರಣದಿಂದಾಗಿ ಸರ್ಕಾರಕ್ಕೆ ಅದ ನಷ್ಟ ಬರೋಬ್ಬರಿ 1.76 ಲಕ್ಷ ಕೋಟಿ...ಅಬ್ಬ!! ಲಕ್ಷ-ಕೋಟಿ ಎರಡರ ಸಮಾಗಮ...ಇನ್ನು ಕಾಮನ್ ವೆಲ್ತ್ ನಿಂದಾದ ಹಗರಣದಿಂದಾಗಿ ಆದ ನಷ್ಟ 27.000 ಕೋಟಿ...ಇನ್ನು ಮುಂಬೈ ನ ಆದರ್ಶ ಹೌಸಿಂಗ್ ಸೊಸೈಟಿಯ ಹಗರಣ....ಕಾರ್ಗಿಲ್ ನಲ್ಲಿ ಮಾಡಿದ ವೀರಯೋಧರ ಕುಟುಂಬಗಳಿಗೆ ನೀಡಿದ ಭೂಮಿಯಲ್ಲಿಯು ನಮ್ಮ ರಾಜಕೀಯ ವ್ಯಕ್ತಿಗಳು, ಅವರ ಸಂಬಂಧಿಕರಿಗೆ ಹಂಚಿದ್ದಾರಂತೆ.....ಇನ್ನು ಬೆಳಕಿಗೆ ಬಾರದ ಹಗರಣಗಳೆಷ್ಟೋ???

ಇದರಲ್ಲಿ ನಮ್ಮ ಕರ್ನಾಟಕದ ಪಾಲೇನು ಕಡಿಮೆಯಿಲ್ಲ...BJP ಆಡಳಿತಕ್ಕೆ ಬಂದು ಎಡರುವರೆ ವರ್ಷ ಆಯಿತು...ಅವರು ಈ ಅವಧಿಯಲ್ಲಿ ಮಾಡಿದ್ದು...ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಆಪರೇಷನ್ ಕಮಲ....ನಂತರ ತಮ್ಮ  ತಮ್ಮ ಅತ್ಮಿಯರಾದವರಿಗೆ  ಖಾತೆ ಹಂಚಿಕೆಯಲ್ಲಿ (ಅದೆಷ್ಟು ಭಾರಿ) ಕಾಲಹರಣ....ಅದಾದ ನಂತರ ರೆಡ್ಡಿ ಸಹೋದರರು ತಿರುಗಿ ಬಿದ್ದಾಗ ಅವರ ಸಮಾಧಾನ ಕಾರ್ಯ....ನಂತರ BJP  ಸರ್ಕಾರವನ್ನು ಅಲುಗಾಡಿಸಿದ ರೆಸಾರ್ಟ್ ರಾಜಕೀಯ.....ಗಣಿ ಅವ್ಯವಹಾರ...ಭೂ ಹಗರಣ....ಒಂದೆರಡಲ್ಲ  ನಮ್ಮ ರಾಜ್ಯ ಸರ್ಕಾರದ ಸಾಧನೆ !!!  ಇವುಗಳ ಮಧ್ಯೆ ಸೀರೆ ಹಂಚುವುದರಲ್ಲಿ....ಚುನಾವಣ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಎಂದಾದರೂ ಸಾಮಾನ್ಯ ಜನರ ಕಷ್ಟಗಳೇನು...ಅದಕ್ಕೆ ಮಾಡಬೇಕಾದುದೇನು ಎಂದು ಯೋಚಿಸಿದ್ದಾರೆಯೇ ?? ಯೋಚಿಸಿದ್ದು ಭ್ರಷ್ಟರಾಗಿ ಎಷ್ಟು ಹಣ ಸಂಪಾದಿಸಬಹುದೆಂದು ಮತ್ತು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೇರೆ ಏರಿಕೆ....ಈ ಎಲ್ಲಾ ಹಗರಣಗಳಿಂದ ಸರ್ಕಾರಕ್ಕೆ ಇಷ್ಟು ಕೋಟಿ ನಷ್ಟವಾಗಿದೆ ಎಂದು ಹೇಳುವಾಗ ನಾವು ತಿಳಯಬೇಕಾಗಿರುವುದು ನಷ್ಟವಾಗಿರುವುದು ಸರ್ಕಾರಕ್ಕೆ  ಇನಿಸಿದರು ಅದರ ಪರಿಣಾಮ ಮಾತ್ರ ಆಗುತ್ತಿರುವುದು ಜನರ ಮೇಲೆ....ನಷ್ಟವಾಗಿರುವ ಇಷ್ಟೂ ಹಣವನ್ನು ಜನ ಸಾಮಾನ್ಯರ ಅಭಿವೃದ್ದಿಗಾಗಿ ಕರ್ಚು ಮಾಡಿದರೆ ನಮ್ಮ ದೇಶ ಬಡತನ ಮುಕ್ತ ರಾಷ್ಟ್ರವಾದರೂ ಆಗುತ್ತಿತ್ತೇನೋ..ಇಂದಿಗೂ ಸಹ ನಮ್ಮ ದೇಶದಲ್ಲಿ 37% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಸಾಮಾನ್ಯರ ಕಷ್ಟಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ...ತಾವಾಯಿತು...ತಮ್ಮ ಕುರ್ಚಿಯಾಯಿತು ಎಂದಿರುವ ಇವರಿಗೆ ಕನಿಷ್ಠ ಮಾನವಿಯತೆಯು ಇಲ್ಲದಂತಾಗಿದೆ....ಹಗರಣಗಳಿಂದಾದ ನಷ್ಟದ ಹಣ ವಾಪಸ್ಸು ಬರುವುದೇ??? ಇಷ್ಟು ಹಣದಲ್ಲಿ ಯಾರ್ಯಾರು ಎಷ್ಟು ಎಷ್ಟು ಹಣ ನುಂಗಿದ್ದಾರೆ?? ಇವುಗಳ ತನಿಖೆ ಆಗುವಷ್ಟರಲ್ಲಿ ಜನರು ಎಲ್ಲವನ್ನು ಮರೆತುಬಿಟ್ಟಿರುತ್ತಾರೆ. ಇವುಗಲ್ಲನ್ನೇ ಅಸ್ತ್ರವಾಗಿಸಿಕೊಂಡು ಪರಸ್ಪರ ಕೆಸೆರೆರಚಾಟವನ್ನು ಪ್ರತಿನಿತ್ಯ ನೋಡುತ್ತಿದ್ದೇವೆ....ಯಾವಾಗಲು "ರಾಜೀನಾಮೆ ನೀಡಲಿ" ಎಂಬ ಮಾತು ಮಾತ್ರ ಕೇಳಿಬರುತ್ತದೆ....ಕೇವಲ ರಾಜೀನಾಮೆ ನೀಡಿದರೆ ಅವರು ಮಾಡಿರುವ ನಷ್ಟಕ್ಕೆ ಸುಮನಾದಂತೆ ಏನು??? ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಆ ಕಡೆಗೆ ಹಾರುವ ಶಾಸಕರು..... ಕುರ್ಚಿ ಕಳೆದುಕೊಂಡಾಗ ಕಣ್ಣಲ್ಲಿ ನೀರು ಹಾಕುವ ಇವರು ನಾವು ಆರಿಸಿ ಕಳುಹಿಸಿರುವ ನಾಯಕರು....

ಇದರ ಜೊತೆಗೆ ಮತ್ತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಚುನಾವಣ ಭರಾಟೆ...ಮತ್ತೆ ಅದೇ ಕುರುಡು ಕಾಂಚನ ಆಟ, ಚುನಾವಣ ನೀತಿ ಸಂಹಿತಿಯನ್ನು ಪಾಲಿಸುವರು ಯಾರು?? ಸಾಮಾನ್ಯ ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವ ಪಕ್ಷಗಳು....ನೋಟಿನ ಆಸೆಗೆ ಓಟನ್ನು ಮಾರಿಕೊಳ್ಳುವ ಕೆಲವು ಮತದಾರರು....ನಮ್ಮನ್ನಾಳುವ ನಾಯಕರನ್ನು ಆರಿಸುವಾಗ ಅವರನ್ನು ಅಳೆಯುವ ಮಾನದಂಡವಾದರೂ ಯಾವದು?? ಜಾತಿ?? ಅಂತಸ್ತು ?? ಇದುವರೆಗೆ ಅವರು ಮಾಡಿರುವ ಜನಸೇವೆಯೇ?? ಇಲ್ಲ ನಮಗೆ ಅವರು ಆ ಕ್ಷಣದಲ್ಲಿ ನೀಡುವ ನೋಟು?? ನಮ್ಮ ಮಾನ್ಯ ಮುಖ್ಯಮಂತ್ರಿಗಳು ಮೊನ್ನೆ ಚುನಾವಣ ಪ್ರಚಾರಕ್ಕಾಗಿ ಹೋಗಿದ್ದಾಗ ಪತ್ರಿಕಾ ಪ್ರತಿನಿಧಿಯೊಬ್ಬರು ಹಗರಣಗಳ ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ...ನಮ್ಮ ಸಾಮಾನ್ಯ ಜನರು ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರಿಗೆ ಇವುಗಳ ಅರಿವೇ ಇಲ್ಲ...ಈ ಬಾರಿಯೂ BJP  ಗೆದ್ದು ಬರಲಿದೆ ಎಂದು....ಇದೇ ಸಾಮಾನ್ಯ ಜನರ ಓಟು ಬೇಕಿತ್ತು ಅವರು ಮುಖ್ಯಮಂತ್ರಿಗಳಾಗಲು....ಸಂಮಿಶ್ರ  ಸರ್ಕಾರದ ಅವಧಿಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಇದನ್ನು ನಾನು ಸಾಮಾನ್ಯ ಜನರ ಮುಂದೆ ಇಡುತ್ತೇನೆ ಎಂದು ಹೇಳುವಾಗ ಸಾಮಾನ್ಯ ಜನ ಬೇಕಿತ್ತು....ಅಷ್ಟೆ ಯಾಕೆ ಕುರ್ಚಿ ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೆಲ್ಲ ಕಣ್ಣಲ್ಲಿ ನೀರು ಹಾಕಿದ್ದು ಇದೆ ಸಾಮಾನ್ಯ ಜನರ ಮುಂದೆ ತಾನೆ???  ಯಾರಿಗೆ ಏನಾದರು ಆಗಲಿ ನಾವು ಭ್ರಷ್ಟರಾಗಿಯೇ ಇರುತ್ತೇವೆ ...ಹಾಗೆಯೆ ಮುಂದುವರೆಯುತ್ತೇವೆ ಎನ್ನುವ ಇಂಥಹವರ ಮಧ್ಯೆ ಜನರ ಗೋಳು ಕೇಳುವರಾರು?? ಎಷ್ಟೆಲ್ಲಾ ನಡೆಯುತ್ತಿದ್ದರು ಸುಮ್ಮನೆ ನೋಡುತ್ತಾ....ಶಾಪ ಹಾಕುತ್ತ...ಅವರಾಡುವ ರಾಜಕೀಯ ದೊಂಬರಾಟ ನೋಡುತ್ತಾ ಏನು ಮಾಡಲಾಗದೆ ಕೈಚೆಲ್ಲಿ ಕುಳಿತಿರುವ ಭವ್ಯ ಭಾರತದ, ಗಂಧದ ಗುಡಿಯ ಚೆಂದದ ಪ್ರಜೆಗಳು ನಾವುಗಳು.......     

11 November 2010

ಎತ್ತ ಸಾಗುತ್ತಿದೆ ನಮ್ಮ ಸಮಾಜ???

ಇಂದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಲ್ಲಿನ ಪ್ರತಿಯೊಬ್ಬ ಪ್ರಜೆಯನ್ನು ಬೆಚ್ಚಿ ಬೀಳಿಸಿದೆ. ಎಲ್ಲೆಲ್ಲು ಅನ್ಯಾಯ, ಅಕ್ರಮ, ಮೋಸವೆ ತುಂಬಿ ಹೋಗಿದೆ. ಅಸಲಿಗೆ ಸಮಾಜಕ್ಕೆ ಬೇಕಾಗಿರುವುದದರು ಏನು? ಮನುಷ್ಯ-ಮನುಷ್ಯರ ನಡುವೆ ನಂಬಿಕೆ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಸಮಾಜ ಸಾಗುತ್ತಿರುವುದದಾರು ಎತ್ತ ಕಡೆಗೆ?? ಮಾನವನ ನೈತಿಕತೆ ಅಧೋಗತಿಗೆ  ಇಳಿದೆದೆ.. ನಂಬಿಕೆ ಎಂಬ ಪದದ ಅರ್ಥವನ್ನು ಮರೆತಂತೆ ವರ್ತಿಸುತ್ತಿದ್ದೇವೆ...ಅದರಲ್ಲೂ ನಮ್ಮ ರಾಜಕೀಯ ಪಕ್ಷದ ನಾಯಕರಂತೂ....ಹೇಳುವುದೇ ಬೇಡ....ಗಾಳಿ ಬಂದಾಗ ತುರಿಕೋ ಎಂಬ ಗಾದೆಯನ್ನು ಅವಕಾಶ ಸಿಕ್ಕಾಗ ಸಿಕಷ್ಟು ಕೋಟಿ ದೋಚಿಕೊ ಎಂಬಂತಾಗಿದೆ....ನಾವು ಬದುಕುತ್ತಿರುವುದು ಸಮಾಜದಲ್ಲಿ "ನಮ್ಮ ಕುಟುಂಬ" ಎಂದಾಗ ಬರುವ ನಮದೆಂಬ ಭಾವನೆ, ಪ್ರೀತಿ, ಕಾಳಜಿ ನಮ್ಮ ಸಮಾಜ ಎನ್ನುವಾಗ ಏಕೆ ಇರುವುದಿಲ್ಲ..ಯಾವಾಗಲು ನಮಗೆ ಏನು ಸಿಗುತ್ತದೆ ಎಂದೂ ಯೋಚಿಸುವಾಗ ನಾವು ಬದುಕುತ್ತಿರುವ ಸಮಾಜಕ್ಕೆ ನಾವು ಮಾಡುತ್ತಿರುವುದಾದರೂ ಏನು??

ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಇಂದು ಬೀದಿ ಬೀದಿಗಳಲ್ಲಿ ಹಾಸ್ಯಾಸ್ಪದವಾಗಿ ಮಾತನಾಡುತ್ತಿರುವುದನ್ನು ಎಷ್ಟೋ ಬರೀ ಕಂಡಿದ್ದೇನೆ..ಅದರಲ್ಲೂ ಇತ್ತೀಚಿಗೆ ಅದು ಹೆಚ್ಚಾಗಿಯೇ ಹೋಗಿದೆ. ನಾವು ನಮ್ಮನ್ನು ಆಳುತ್ತಿರುವ ನಾಯಕರನ್ನು ಜೋಕರ್ ಗಳೆಂದು ತಿಳಿದು ನಗುತ್ತಿದ್ದೆವೋ?? ಇಲ್ಲ ನಮ್ಮ ಕೈನಲ್ಲಿ ಏನು ಮಾಡಲಗದೆಂದು ಅಸಹಾಯಕತೆ ಇಂದ ನಗುತ್ತಿದ್ದೆವೋ ತಿಳಿಯದಾಗಿದೆ. ಸಮಾಜದಲ್ಲಿ ಬುದ್ದಿಜೀವಿಗಳೆನಿಸಿಕೊಂಡವರು ಮಾಡುತ್ತಿರುವುದಾದರೂ ಏನು?? ಎಲ್ಲವು ಸರಿ ಇದ್ದಾಗ ಕೊಂಕು ತೆಗೆಯುವ, ಏನು ಸರಿ ಇಲ್ಲದಿದ್ದಾಗ ಸುಮ್ಮನಿರುವ ಎಲ್ಲಿಗೆ ಹೋಗಿದ್ದಾರೆ?? ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಗುರುಗಳು, ನಮಗೆ ಗಾಂಧೀಜಿ, ನೆಹರು, ಬೋಸ್, ವಿಶ್ವೇಶ್ವರಯ್ಯ ಮುಂತಾದವರ ಜೀವನ-ಸಾದನೆಗಳ ಬಗ್ಗೆ ಹೇಳಿ ತಿಳಿಸುತ್ತಿದ್ದರು. ಆದರೆ ನಮ್ಮ ಮುಂದಿನ ಪೀಳಿಗೆಗೆ ಇಂಥಹ ಮಹಾನ್ ವ್ಯಕಿಗಳ ಬಗ್ಗೆ ತಿಳಿಸುವುದನ್ನು ಬಿಟ್ಟು ಹೀನ ರಾಜಕೀಯ ನಡೆಸುತ್ತಿರುವ, ನಮ್ಮ ರಾಜಕೀಯ ಮಹಾನ್ ನಾಯಕರೆಂದು ಕರೆಸಿಕೊಳ್ಳುವ      (ಸ್ವ)ತಂತ್ರ ವ್ಯಕಿಗಳ ಬಗ್ಗೆ ತಿಳಿಸಿ ಕೊಡುವ ಕಾಲ ಬಂದರು ಬರಬಹುದು... ಗಾಂಧಿ, ನೆಹರು ಮುಂತಾದವರ ಬಗ್ಗೆ ಹೇಳುವಾಗ ಇರುವ ಹೆಮ್ಮೆ, ಪ್ರತಿಷ್ಠೆ, ಗೌರವ, ದೇಶ ಭಕ್ತಿ ಮತ್ತು ಇವರು ನಮ್ಮವರೆಂಬ ಭಾವನೆ ಇರುತ್ತದೆ. ಆದರೆ ನಮ್ಮ ಇಂದಿನ ನಾಯಕರ ಬಗ್ಗೆ ಹೇಳುವಾಗ ನಮ್ಮ ಬಗ್ಗೆ ನಮಗೆ ನಾಚಿಕೆ ಎನಿಸಿ, ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯ ಬಗ್ಗೆ ವಿವರಿಸಬೇಕಗುತ್ತದೆ.

ಇಂದು ಸಹ ಅದೆಷ್ಟೋ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗದೆ ಬಾಲ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ ನಮ್ಮ (ಅ )ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರಲು ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ. ತಲೆ ಬುರುಡೆ ಸೀಳಿದರು ಎರಡಕ್ಷರವಿಲ್ಲದ, ನಾಗರಿಕತೆ ತಿಳಿಯದ, ಸಭೆ-ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ತಿಳಿಯದ, ಬಟ್ಟೆ ಹರಿದುಕೊಂಡು ಪ್ರಾಣಿಗಳಂತೆ ಅಧಿಕಾರಕ್ಕಾಗಿ ಕೂಗಾಡುವ ಇವರು ನಮ್ಮ ನಾಯಕರು....ಇವರಿಗೆ ಬೇಕಾಗಿರುವುದು ದುಡ್ಡು ಸಂಪಾದನೆ ಮಾತ್ರ. BA, MA, Ph.D...ಶಿಕ್ಷಣ ಪಡೆದು 15-20 ಸಾವಿರ ಸಂಬಳ ಪಡೆಯುವವರ ಮಧ್ಯೆ ಶಿಕ್ಷಣದ ಮೂಲ ಧ್ಯೇಯವೇ ತಿಳಿಯದ ಇಂಥವರು, ಪೂರ್ವಿಕರು ಮಾಡಿಟ್ಟ ಆಸ್ತಿ ಖರ್ಚು ಮಾಡುತ್ತ ಚುನಾವಣೆಗಳಲ್ಲಿ ಗೆದ್ದು ಖರ್ಚು ಮಾಡಿದ ಹತ್ತರಷ್ಟು ಸಂಪಾದಿಸುವ ಇವರ ಮಧ್ಯೆ ವಿಧ್ಯೆ, ವಿದ್ಯಾವಂತರಿಗೆ ಇರುವ ಮೌಲ್ಯವಾದರೂ ಏನು?? ನಮ್ಮ ಯುವ ಸಮುದಾಯ ಮಾಡುತ್ತಿರುವುದಾದರೂ ಏನು? ತಿಂಗಳಿಗೊಮ್ಮೆ ಸಂಬಳ ಪಡೆದು ತಮ್ಮ ಮನೆ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಸಾಕೆ? ಹೇಗೆ ಮಾಡುವ ನಮಗೂ ಬ್ರಷ್ಟ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ ವಾದರೂ ಏನು? ನಮ್ಮ ನಾಯಕರ ಆಸ್ತಿಯ ಬೆಲೆ ಕೋಟಿಗಟ್ಟಲೆ ಇದೆ. ಆದರೆ ಅಂದು ಸ್ವಾತಂತ್ರಕ್ಕಾಗಿ ಹೋರಾಡಿದವರ bank balance ಎಷ್ಟಿತ್ತು? ಅವರ ಬಳಿ ಇದ್ದ ಕಾರುಗಳೆಷ್ಟು? ಮನೆಗಳೆಷ್ಟು? ಚಿನ್ನ ಎಷ್ಟು? ಇಂದು ಜನರಿಗಾಗಿ ಏನು ಮಾಡದೇ ಇರುವ ಒಬ್ಬ MLA, MP ಯ ಬಳಿ ಇರುವ ಆಸ್ತಿ ಎಷ್ಟು ?? ರಾಜಕೀಯ ರಂಗ ಇಂದು ಸಮಾಜಸೇವೆಗಲ್ಲ ಬದಲಿಗೆ ಸ್ವ ಸೇವೆಗಿದೆ..
ರಾಜ್ಯದ ಹಲವು ಕಡೆ ಸಮಸ್ಯೆಗಳು ತುಂಬಿ ತುಳುಕಾಡುತ್ತಿದೆ. ಹಾಸನದಲ್ಲಿ ಆಲೂಗೆಡ್ಡೆ ಬೆಳೆದ ರೈತನಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿದ್ದಾನೆ, ಬಳ್ಳಾರಿಯಲ್ಲಿ ಮಲೇರಿಯಾದಿಂದ ಜನ ಸಾಯುತ್ತಿದ್ದಾರೆ, ಹಾವೇರಿಯಲ್ಲಿ ಬೆಳೆ ಬೆಳೆದ ರೈತ ಆತ್ಮಹತ್ಯೆಗೆ ಶರಣಗುತ್ತಿದ್ದಾನೆ, ಮೊನ್ನೆ ಮೊನ್ನೆಯಷ್ಟೇ ಸಂಭವಿಸಿದ ಜಲ್  ಚಂಡಮಾರುತದಿಂದಾಗಿ  ಅದೆಷ್ಟೋ ಜನರು ಮನೆ ಕಳೆದು ಕೊಂದು ಬೀದಿಗೆ ಬಿದ್ದಿದ್ದಾರೆ, ಇಂತಹ ವೇಳೆಯಲ್ಲಿ ಒಬ್ಬ ಜವಾಬ್ಧಾರಿಯುತ ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ಮಿ ಯೋಜನೆಯಡಿ ತಾಯಂದಿರಿಗೆ ಸೀರೆ ವಿತರಿಸಲು CM ಹೋಗಬೇಕೆ ?? ಹಾಗೆ ಹೋಗಲು ಮಾಡುವ ಖರ್ಚು-ವೆಚ್ಚ ಎಷ್ಟು... ಸೀರೆ ವಿತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸುವರೆ? ಇಲ್ಲ ತಾಯಂದಿರು CM  ಬಂದೆ ನೀಡಲಿ ಎಂದೂ ಹಠ ಹಿಡಿದಿದ್ದರೆಯೇ?? ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳದ ಹೊರತು ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗದು....ಇದು ನನ್ನ ವಯುಕ್ತಿಕ ನಿಲುವು......

08 November 2010

ಭಾವನೆಗಳ ಸುಳಿಯಲ್ಲಿ ನಾನು...!!!

ಮಾನವ ಭಾವನಾಜೀವಿ ಎಂದು ಎಲ್ಲರು ಹೇಳುವುದು ಸರ್ವೇ ಸಾಮಾನ್ಯ ಮಾತು..ಅದರಲ್ಲಿಯೂ ನನಗೆ ಅತೀ ಭಾವುಕತೆ ಎಂಬುದು ಆ ದೇವರು ನನಗೆ ಕೊಟ್ಟಿರುವ ವರವೋ ಅಥವಾ ಶಾಪವೋ ನನಗೆ ತಿಳಿದಿಲ್ಲ...ನನಗೆ ಅತಿ ಸಂತೋಷವಾದರೂ ಇಲ್ಲ ಆತಿ ದುಃಖವಾದರೂ ನನ್ನ ಮೊದಲ ಪ್ರತಿಕ್ರಿಯೆ ಕಣ್ಣು ಮುಚ್ಚಿ ಅತ್ತುಬಿಡುವುದು.....ಆಫೀಸ್ ಕೆಲಸದ ನಿಮಿತ್ತ ಕೊಡಗಿಗೆ ಹೋಗಿ ಅಲ್ಲಿ ಕೆಲ ದಿನಗಳನ್ನು ಕಳೆದ ನಾನು ಅಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಹೇಳುತ್ತಿದ್ದೇನೆ....

ನಾನು ಮತ್ತು ನನ್ನ ಸಹೋದ್ಯೋಗಿ  ಇಬ್ಬರು ಕೊಡಗಿನಲ್ಲಿ ಉಳಿದುಕೊಳ್ಳಲು ಹೋಟೆಲ್ ರೂಂ ಬೇಕೆಂದು ಹೇಳಿದಾಗ ನನ್ನ ಪರಿಚಯವೇ ಇಲ್ಲದ, ನನ್ನ ಮುಖವನ್ನೇ ನೋಡದ ವ್ಯಕ್ತಿಯೊಬ್ಬರು ನಮಗೆ ಕುಶಾಲನಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು...ಅವರ ಹೆಸರು ಮಂಜೇಶ್, ಅವರು ಹುಟ್ಟಿ ಬೆಳೆದಿದ್ದೆಲ್ಲ ಕುಶಾಲನಗರದಲ್ಲಿಯೇ....ನಾನು ಅತಿ ಹೆಚ್ಚು ಗೌರವಿಸುವ ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ. 24/10/10 ಭಾನುವಾರ ಬೆಂಗಳೂರಿನಿಂದ ಹೋರಾಟ ನಮಗೆ ನಿರಂತರ ಸಂಪರ್ಕದಲ್ಲಿದ್ದು ನಾನು ಹೋಟೆಲ್ ತಲುಪುವವರೆಗೂ ಫೋನ್ ಮಾಡುತ್ತ ನಾವೆಲ್ಲಿದ್ದೇವೆ..ಅಲ್ಲಿಂದ ಯಾವ ಮಾರ್ಗವಾಗಿ, ಹೇಗೆ ಬರಬೇಕೆಂದು ತಿಳಿಸುತ್ತಿದ್ದರು...ಅಂತೆಯೇ ನಾವು ಹೋಟೆಲ್ ತಲುಪಿದ ಮೇಲೆ ನಮ್ಮ ಟೂರ್ ಪ್ಲಾನ್ ಏನೆಂದು ಕೇಳಿ ಪ್ರತಿದಿನ ಬೆಳಿಗ್ಗೆ ಫೋನ್ ಮಾಡಿ ನಾವು ತಲುಪಬೇಕಾದ ಮಾರ್ಗಕ್ಕೆ ಹೇಗೆ ತಲುಪಿದರೆ ಸೂಕ್ತ ಎಂದು ತಿಳಿಸುತ್ತಿದ್ದರು...ನಾನು ಬಂದು ಆರು ದಿನಗಳು ಕಳೆದರು ಕೆಲಸ ಒತ್ತಡದಲ್ಲಿ ಅವರನ್ನು ಭೇಟಿಮಾಡಲು ನನಗೆ ಸಮಯ ಸಿಕ್ಕಿರಲಿಲ್ಲ...ಆದರೆ ಶುಕ್ರವಾರ 29/10/10 ರಂದು ಮಂಜೇಶ ಅವರು ಬೆಳಿಗ್ಗೆ ಸುಮಾರು 10.30 ಕ್ಕೆ ಫೋನ್ ಮಾಡಿ ತಮ್ಮ ಹೆಂಡತಿಯನ್ನು ಹೆರಿಗೆಗಾಗಿ ಗೋಣಿಕೊಪ್ಪಲಿನ ಸರ್ಕಾರೀ ಆಸ್ಪತ್ರೆಗೆ ಸೇರಿಸಿರುವುದಾಗಿ ಎಂದು ಹೇಳಿದರು ನಾನು ಕೂಡ ಅದೇ ಸ್ಥಳಕ್ಕೆ ಹೋಗುತ್ತಿದ್ದೆ...ನಾನು ಅಲ್ಲಿಯೇ ನಿಮ್ಮನ್ನು ಬಂದು ಕಾಣುವುದಾಗಿ ಅವರಿಗೆ ತಿಳಿಸಿದೆ ಅದಕ್ಕೆ ಅವರು ನಿಮ್ಮ ಕೆಲಸ ಮುಗಿಸಿ ಬನ್ನಿ ಎಂದರು..ಸರಿ ಎಂದು ಸುಮಾರು 2.30 ಕ್ಕೆ ನನ್ನ ಕೆಲಸವನೆಲ್ಲ ಮುಗಿಸಿ ಅವರನ್ನು ಕಾಣಲು ಹೋದೆ..ಆಸ್ಪತ್ರೆ ಪ್ರವೇಶಿಸಿದ ನನಗೆ ಎದುರಿಗೆ ಕಂಡೆ ಅವರನ್ನು ಗುರುತಿಸಲು ಕಷ್ಟ ಆಗಲಿಲ್ಲ ಕಾರಣ ಒಂದು ಅವರ ದ್ವನಿ ಪರಿಚಯ ಮತ್ತೊಂದು ಅವರ ಮುಖದ ಮೇಲಿದ್ದ ಆತಂಕ ಮತ್ತು ಕಾತರತೆ...ನಾನು ತಂದಿದ್ದ ಹಣ್ಣಿನ ಚೀಲವನ್ನು ಅವರ ಕೈಗೆ ಕೊಟ್ಟು ನಿಮ್ಮ ಹೆಂಡತಿ ಎಲ್ಲಿ ಎಂದೆ.. ಈಗ ತಾನೆ ನೋವು ಕಾಣಿಸಿಕೊಂಡಿತು ಒಳಗೆ ಇದ್ದರೆ ಎಂದು ಹೇಳಿ ಇಬ್ಬರು ಒಳಗೆ ಹೋದೆವು..ಅಲ್ಲಿ ಮಂಜೇಶ್ ಅವರ ಅತ್ತೆ ಸ್ವಲ್ಪ ಗಾಬರಿಯಿಂದ ತಮ್ಮ ಮಗಳನ್ನು ಓಡಾಡಿಸುತ್ತಿದ್ದರು.. ನನ್ನ ಪರಿಚಯವಾದ ಮೇಲೆ ಅವರನ್ನು ನಾನೇ ಕೈ ಹಿಡಿದು ಓಡಾಡಿಸುತ್ತಿದ್ದೆ... ಆಕೆ ಅತಿಯಾದ ನೋವಿನಿಂದ ನರಳುವುದನ್ನು ಕಂಡು ನಾನು ಗಾಬರಿಯಾದೆ...ನಾನು ಹೆಣ್ಣಲ್ಲವೇ....??? ಕೊನೆಗೆ ನಡೆಯಲು ಆಗದೇ ಇದ್ದಾಗ ನುರ್ಸೆ ಬಂದು labour ward ಗೆ ಕರೆದು ಕೊಂದು ಹೋದರು.. ಅಲ್ಲಿದ್ದ ಮಂಜೇಶ್, ಅವರ ಅತ್ತೆ ಮತ್ತು ನಾನು..ಎಲ್ಲರ ಮುಖದಲ್ಲಿಯೂ ಗಾಬರಿ.....ಇತ್ತಿಚೆಗೆಷ್ಟೆ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ಓದಿ ಅಲ್ಲಿ ಹೇಳುವ ಅಜ್ಜಿಯ ಮಾತುಗಳಿಂದ ಪ್ರಭಾವಿಥಳಗಿದ್ದ ನಾನು ಅಂದಿನಿಂದ ದೇವರ ಮುಂದೆ ನಿಂತು ನನಗೆ ಅದು ಕೊಡು...ಇದು ಕೊಡು ಎಂದು ಕೇಳುವುದನ್ನು ಬಿಟ್ಟುಬಿಟ್ಟಿದ್ದೆ. ಆದರೆ ಮಂಜೇಶ ಅವರ ಪತ್ನಿ ಅನುಭವಿಸುತ್ತಿದ್ದ ನೋವನ್ನು ನೋಡಿ...ಅಳು ಬರುವಂತಾಗಿ ದೇವರನ್ನು ಪ್ರಾರ್ಥಿಸಿದೆ. ನನ್ನನ್ನು ನೋಡಿ ಮಂಜೇಶ್ ನೀವು ಮೊದಲ ಬಾರಿಗೆ ಇದನೆಲ್ಲ ನೋಡುತ್ತಿದ್ದೀರ ಎಂದು ಕೇಳಿದರೂ..ನಾನು ಹೌದು ನಾನು ಚಿಕ್ಕವಳಿದ್ದಾಗಲೇ ನನ್ನ ಅಣ್ಣಂದಿರು ಮತ್ತು ಅಕ್ಕನಿಗೆ ಮದುವೆಯಾಗಿದ್ದು ಇಂಥಹ ಸಂದರ್ಭ ಎದುರಿಸುತ್ತಿರುವುದು ಇದೆ ಮೊದಲಿಗೆ ಎಂದೆ...ಅದೇನೇ ಇದ್ದರು ನನ್ನ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರು ಕೇವಲ ಕೆಲ ಕ್ಷಣಗಳ ಪರಿಚಯದ ಮೂಲಕ ನಾನು ಕೂಡ ಅವರ ಮನೆಯವರಲ್ಲಿ ಒಬ್ಬಳಾಗಿಬಿಟ್ಟೆ ಎನಿಸಿತು...ಹೆರಿಗೆ ಅದ ನಂತರ ಮಗುವನ್ನು ಅವರ ತಾಯಿಯ ಕೈಗೆ ಕೊಟ್ಟರು. ನನಗೆ ಅತೀ ಆಶ್ಚರ್ಯ ಎನಿಸಿದ್ದು ಮಗುವನ್ನು ನೋಡಿದ ಕೂಡಲೇ ಮಂಜೇಶ್ ಅದು ಗಂಡು ಮಗುವೋ ಅಥವ ಹೆಣ್ಣೋ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಅತೀ ಭಾವುಕರಾಗಿ ಮಗುವನ್ನು ನೋಡುತ್ತಿದ್ದ ಪರಿ...ಆದರೆ ಅವರ ಅತ್ತೆ ಮಾತ್ರ ಮಗು ಕೈಸೇರಿದ ಕೂಡಲೇ ಅಲ್ಲಿಯೇ ಕೆಳಗೆ ಕೂತು ಅವಸವಸರವಾಗಿ ನೋಡಿ ಮಗು ಗಂಡು ಎಂದು ಬಿಟ್ಟರು ಆದರೆ ಸ್ವಲ್ಪ ಸಮಯದ ನಂತರ ತಿಳಿದುದು ಅದು ಹೆಣ್ಣು ಮಗುವೆಂದು ಆದರೆ ಹೆಣ್ಣು ಮಗು ಎಂದಾಕ್ಷಣ ಯಾವುದೇ ನಿರಾಸೆ ಭಾವ ತೋರದೆ ತಂದೆಯಾದನೆಂಬ ತೃಪ್ತ ಭಾವ ಮಂಜೇಶ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು...ಅಲ್ಲಿಂದ ಹೊರಬಂದ ನಾನು ಬಸ್ಸಿನಲ್ಲಿ ಕೂತು ಯೋಚಿಸುತ್ತಿದ್ದೆ...ಯಾರಿಗಾದರೂ ಸಹಾಯ ಮಾಡಬೇಕಾದ ಸಂದರ್ಭ ಬಂದಾಗ ಅನೇಕರು ಅಯ್ಯೋ ನನಗೆ ಆರೋಗ್ಯ ಸರಿ ಇಲ್ಲ...ನಾನು ಕೂಡ ಊರಿನಲ್ಲಿ ಇರುವುದಿಲ್ಲ...ಹೇಗೆ ಅನೇಕ ಕಾರಣ ಕೊಡುವ ಜನರು ನಮ್ಮಲ್ಲಿ ಅನೇಕರಿದ್ದಾರೆ...ಆದರೆ ತಮ್ಮ ಹೆಂಡತಿಯನ್ನು ಹೆರಿಗೆಗೆ ಸೇರಿಸಿದ ನಂತರವೂ ನನಗೆ ಫೋನ್ ಮಾಡಿ ನಮ್ಮನ್ನು ವಿಚಾರಿಸುತ್ತಿದ್ದ ಜೊತೆಗೆ ನನ್ನು ಆಸ್ಪತ್ರೆ ಯಿಂದ ಹೊರ ಬಂದ ಮೇಲೂ ಅಲ್ಲಿನ ಆತಂಕದ ವಾತಾವರಣದಲ್ಲಿಯೂ ನನ್ನ ಮತ್ತು ನನಗೆ ಬಸ್ ಸಿಕ್ಕಿತ...ಇಲ್ಲವೆಂದು....ಕೇಳಿ ತಿಳಿಯುತ್ತಿದ್ದ ಅವರ ಮೇಲೆ ನನಗೇನೋ ಅತ್ಹ್ಮಿಯ ಭಾವ ಮೂಡಿತ್ತು...ನನಗೆ ಪ್ರತಿ ಹೆಜ್ಜೆಯಲ್ಲಿಯೂ ಸಹಾಯ ಮಾಡಿದ ಮಂಜೇಶ್ ಅಂಥವರು ಸಮಾಜಕ್ಕೆ ಅಗತ್ಯವಾಗಿ ಬೇಕು...ಹೇಗೆ ಅವರ ಸಹಾಯ ಮನೋಭಾವ ಮುಂದುವರೆಯಲೆಂದು ನನ್ನ ಹಾರೈಕೆ ಮತ್ತು ಅವರ ಈ ದೊಡ್ಡಗುಣಕ್ಕೆ ನನ್ನ ಸಣ್ಣ ಕೃತಜ್ಞತೆ....

ಇದರ ನಂತರ ನನ್ನನ್ನು ಭಾವುಕಳಗುವಂತೆ ಮಾಡಿದ ಇನ್ನೊಂದು ಘಟನೆ..ಪ್ರತಿ ದಿನ ನಾನು ಉಟಕ್ಕೆ ಹೋಗುತ್ತಿದ್ದ ಹೋಟೆಲ್ ನಲ್ಲಿ cleaning ಕೆಲಸ ಮಾಡುತ್ತಿದ್ದ ಸುಮಾರು 75-80 ವರ್ಷದ ವೃದ್ದ... ಅವರನ್ನು ನೋಡಿದ ವೇಳೆ ಊಟ ಮಾಡಲು ನನ್ನಿಂದ ಆಗುತ್ತಿರಲಿಲ್ಲ..ನಾನು ಬಹಳಷ್ಟು ಹೋಟೆಲ್ ಗಳಲ್ಲಿ ಇದನ್ನು ನೋಡಿದ್ದೇನೆ. ವಯಸ್ಸಾದ ಹಿರಿಯರು ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ನನಗೆ ಅನ್ನಿಸಿದ್ದು ಅಯ್ಯೋ ಪಾಪ ಎಷ್ಟು ವಯಸ್ಸಾಗಿದೆ ಆದರೂ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾರು ಇಲ್ಲವೇ ? ಇದ್ದರೆ  ಏಕೆ ವಯಸ್ಸಾದ ತಂದೆ-ತಾಯಿಯರನ್ನು ನೋಡಿಕೊಳ್ಳದೆ ಏಕೆ ಬೀದಿಗೆ ತಳ್ಳುತ್ತಾರೆ ಎಂದು ಅವರಿಗೆ ಶಾಪ ಹಾಕುವುದೇನೋ ಖಚಿತ...ಅದಾರು ಹೀಗೆ ಬೀದಿಗೆ ಬಿದ್ದ ವಯಸ್ಸಾದವರಿಗೆ ಹೋಟೆಲ್ ನವರು ಕೆಲಸ ಕೊಟ್ಟು ತಮ್ಮ ಅನ್ನವನ್ನು ತಾವೇ ಸಂಪಾದಿಸಿ ಕೊಂದು ತಿನ್ನಿವಂತೆ ಮಾಡಿದ್ದರೆ ಅಂದುಕೊಂಡು ಅಕಸ್ಮಾತ್ ಇವರಿಗೆ ಇಲ್ಲಿ ಕೆಲಸ ಇಲ್ಲ ಎಂದಾದರೆ ಅವರ ಪಾಡು ಏನು? ಬಿಕ್ಷೆ ಬೇಡುವುದು ಇಲ್ಲ ಹಸಿವಿನಿಂದ ಬೀದಿ ಹೆಣವಾಗಿ ಹೋಗುವುದು...ಅವರನ್ನು ನಿತ್ಯ ನೋಡುತ್ತಿದ್ದ ನಾನು ಒಂದು ದಿನ ನಿಮಗೆ ಮಕ್ಕಳು ಇಲ್ಲವೇ ಎಂದು ಕೇಳಿಯೇ ಬಿಟ್ಟೆ ಅದಕ್ಕೆ ಆತ ಇದ್ದರೆ ಇಂದು ಹೇಳಿ ಅವರ ಮಕ್ಕಳನ್ನು ದೂರುವುದಗಲಿ....ಶಪಿಸುವುದಗಲಿ ಮಾಡಲಿಲ್ಲ...ಸರಿ ಇಂದು ಅವರಿಗೆ ಹತ್ತು ರೂಪಾಯಿ ಕೊಟ್ಟು ಅಲ್ಲಿಂದ ಎದ್ದು ಬಂದೆ.....

ನಾನು ಕೊಟ್ಟ ಹತ್ತು ರೂಪಾಯಿ ಕೇವಲ ಒಂದು ಕಾಫೀ ಕುಡಿದರೆ ಕಾಲಿಯಗುವುದು. ಹೆತ್ತ ಮಕ್ಕಳಿದ್ದರು ಹೇಗೆ ವಯಸ್ಸಾದ ಕಾಲದಲ್ಲಿ ದುಡಿದು ತಿನ್ನುವ ಇಂತಹವರಿಗೆ ಶಾಶ್ವತ ಪರಿಹಾರ ಏನು?? ಹೆತ್ತವರಿಗೆ ಸ್ವರ್ಗ ಸುಖ ನೀಡುವುದು ಬೇಡ ಕೊನೆಪಕ್ಷ ಅವರಿಗೆ ತಿನ್ನಲು ಎರಡು ಹೊತ್ತು ಊಟ ಹಾಕುವ ಶಕ್ತಿ ಮಕ್ಕಳಿಗೆ ಇಲ್ಲವೇ ?? ಹಾಗೆಯೆ ಕೊಡವರ ಸಂಸ್ಕೃತಿ ಅರಿಯಲು ಅಲ್ಲಿನ ಕೊಡವರ ಮನೆಗೆ ಬೀಟಿ ನೀಡುತ್ತಿದ್ದ ನನಗೆ ಎಷ್ಟೋ ವಯಸ್ಸಾದ ವ್ರುದ್ದರನ್ನು ಕಾಣುವ ಸಂದರ್ಭವು ಎದುರಾಯಿತು....ಅಲ್ಲಿಯೂ ಕೂಡ ಹೀಗೆ ಮಕ್ಕಳು ತಂದೆ-ತಾಯಿಯರನ್ನು ಒಂಟಿಯಾಗಿ ಬಿಟ್ಟು ವಿದೇಶಗಳಲ್ಲಿ, ಬೆಂಗಳೂರು, ಮಂಗಳೂರು, ...ಹೇಗೆ ಅನೇಕ ಕಡೆ ನೆಲಸಿದ್ದಾರೆ...ಎಲ್ಲಿಯೂ ಸಹ ಪೋಷಕರು ಒಂಟಿ ...ಆದರೆ....ಕೂತು ತಿನ್ನುವಷ್ಟು ಆಸ್ತಿ ಇದೆ. ಜೊತೆಗೆ ಮನೆ ಕೆಲಸಕ್ಕೆ, ಅಡುಗೆ ಮಾಡಲು ಕೆಲಸದವರು ಇರುತ್ತಾರೆ ಆದರೂ ಅವರು ಒಂಟಿ....ಇತ್ತ ಆಸ್ತಿಯು ಇಲ್ಲದ... ಮಕ್ಕಳು ತಮ್ಮ ಹೊಣೆ ಹೊರದ ಅನೇಕ ವೃದ್ದರು ನಮ್ಮ ನಡುವೆ ಇದ್ದರೆ...ಒಂದೇ ಸಮಾಜದಲ್ಲಿ ಎಷ್ಟೊಂದು ವೈವಿದ್ಯತೆ...ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಸಂಭಂದಗಳ ಸ್ವರೂಪ, ಸುಖ-ದುಃಖ, ಜೀವನದ ಕಲ್ಪನೆ, ಪ್ರೀತಿ-ವಿಶ್ವಾಸ....ಅದೇನೇ ಇದ್ದರು ಮೊದಲು ನಾವು ಮಾನವರು..ಭಾವನೆಗಳೇ ನಮ್ಮ ಬದುಕು ಆದ್ರೆ ವಾಸ್ತವಾಂಶ ಬೇರೆ ಅಲ್ಲವೇ ??

ನನ್ನ ಆಯಸ್ಸು ನೂರು ವರ್ಷ ಎಂದು ಅಂದುಕೊಂಡರು ಎಗಾಗಲೇ ನಾನು 1/4 ಭಾಗ ಸುಮ್ಮನೆ ವ್ಯರ್ಥ ಮಾಡಿದ್ದೇನೆ...ನನ್ನ ಈ 26 ವರ್ಷಗಳಲ್ಲಿ ನಾನು ಯಾರಿಗೂ ಕಿಂಚಿತ್ತು ಸಹಾಯ ಮಾಡಿಲ್ಲ...ಯಾರಿಗೆ ಯಾಕೆ ಇನ್ನು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನನ್ನ ಜೀವನದ ಮಹತ್ವದ ಕನಸೆಂದರೆ ಕೊನೆ ಪಕ್ಷ 5-6 ಅನಾಥ ಮಕ್ಕಳನ್ನು ಸಾಕುವುದು ಇದಕ್ಕಾಗಿ ಕೆಲ ಅನಾಥ ವ್ರುದ್ದರನ್ನು ಸಾಕಿ ಆ ಮಕ್ಕಳನ್ನು ಬೆಳೆಸಲು ವೃದ್ದರ ಸಹಾಯ ಪಡೆಯುವುದು.. ಇದು ಎಷ್ಟರ ಮಟ್ಟಿಗೆ ಸಫಲವಗುವುದೆಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ಏರುವುದು ನಮ್ಮ ಕೈಯಲ್ಲೇ ಅಲ್ಲವೇ?? ನಿರಂತರ ಪ್ರಯತ್ನ ಅಗತ್ಯ......ನಾನು ಅದೇ ಪ್ರಯತ್ನದಲ್ಲಿದ್ದೇನೆ.......